ಎನ್‌ಜಿಒದ ಬ್ಯಾಂಕ್ ಖಾತೆಗಳನ್ನು ಸ್ತಂಭನಮುಕ್ತಗೊಳಿಸಲು ಆದೇಶ

ಮುಂಬೈ,ಜ.31: ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ನಡೆಸುತ್ತಿರುವ ಎನ್‌ಜಿಒ ‘ಲಾಯರ್ಸ್ ಕಲೆಕ್ಟಿವ್ ’ನ ದೇಶಿಯ ಮತ್ತು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ವ್ಯಾಪ್ತಿಗೊಳಪಡದ ಬ್ಯಾಂಕ್ ಖಾತೆಗಳನ್ನು ಸ್ತಂಭನಮಕ್ತಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಆದೇಶಿಸಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ತಡೆಯುವ ಅಧಿಕಾರವನ್ನು ಎಫ್‌ಸಿಆರ್‌ಎ ಸರಕಾರಕ್ಕೆ ನೀಡಿಲ್ಲ ಎಂದು ಅದು ಬೆಟ್ಟು ಮಾಡಿದೆ.
ನ್ಯಾ.ಎಂ.ಎಸ್.ಸೋನಕ್ ಅವರು ಸೋಮವಾರ ನೀಡಿದ ಮಧ್ಯಂತರ ಆದೇಶದಲ್ಲಿ ‘ಲಾಯರ್ಸ್ ಕಲೆಕ್ಟಿವ್ ’ ನ ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡದಂತೆ ಚ್ಯಾರಿಟಿ ಕಮಿಷನರ್‌ರನ್ನು ನಿರ್ಬಂಧಿಸಿದರು.
ಎಫ್‌ಸಿಆರ್‌ಎ ಅಡಿ ಸರಕಾರವು ಸಂಸ್ಥೆಯೊಂದಕ್ಕೆ ವಿದೇಶಿ ದೇಣಿಗೆಗಳನ್ನು ನಿಯಂತ್ರಿಸುವ ಅಥವಾ ತಡೆಯುವ ಅಧಿಕಾರವನ್ನು ಹೊಂದಿದೆಯಾದರೂ ವ್ಯಕ್ತಿಗಳು ಅಥವಾ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ತಡೆಯುವ ಅಧಿಕಾರವನ್ನು ಅದು ಸರಕಾರಕ್ಕೆ ನೀಡಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.
ಕೇಂದ್ರ ಗೃಹ ಸಚಿವಾಲಯವು ಕಳೆದ ವರ್ಷದ ನವಂಬರ್‌ನಲ್ಲಿ ವಿದೇಶಿ ನಿಧಿಯ ದುರುಪಯೋಗದ ಆರೋಪದಲ್ಲಿ ‘ಲಾಯರ್ಸ್ ಕಲೆಕ್ಟಿವ್ ’ ನ ಎಫ್‌ಸಿಆರ್‌ಎ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಿತ್ತು. ಅದರ ಎಲ್ಲ ಬ್ಯಾಂಕ್ ಖಾತೆಗಳ ಸ್ತಂಭನ ಮತ್ತು ಆಸ್ತಿಗಳ ಜಪ್ತಿಗೂ ಅದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಎನ್‌ಜಿಒ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.







