ಸುರಕ್ಷತೆ,ಮೂಲಸೌಕರ್ಯ ಅಭಿವೃದ್ಧಿಗೆ ರೈಲ್ವೆ ಮುಂಗಡಪತ್ರದ ಗಮನ

ಹೊಸದಿಲ್ಲಿ,ಜ.31: ವಿತ್ತಸಚಿವ ಅರುಣ ಜೇಟ್ಲಿ ಅವರು ಫೆ.1ರಂದು ಮಂಡಿಸಲಿರುವ ,ಪ್ರತ್ಯೇಕ ಮಂಡನೆಯ 92 ವರ್ಷಗಳ ಸುದೀರ್ಘ ಸಂಪ್ರದಾಯವನ್ನು ಕೈಬಿಟ್ಟು ಇದೇ ಮೊದಲ ಬಾರಿಗೆ ಸಾಮಾನ್ಯ ಮುಂಗಡಪತ್ರದಲ್ಲಿ ವಿಲೀನಗೊಂಡಿರುವ ರೈಲ್ವೆ ಬಜೆಟ್ ಹೊಸ ನಿರೀಕ್ಷೆಗಳನ್ನು ಗರಿಗೆದರಿಸಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಸರಣಿ ಅಪಘಾತಗಳಿಂದ ಕಂಗೆಟ್ಟಿರುವ ರೈಲ್ವೆಗೆ 20,000 ಕೋ.ರೂ.ಗಳ ಸುರಕ್ಷತಾ ನಿಧಿ, ಹೊಸ ರೈಲುಮಾರ್ಗಗಳ ಅಭಿವೃದ್ಧಿ, ನಿಲ್ದಾಣಗಳ ನವೀಕರಣ, ರೈಲು ಅಭಿವೃದ್ಧಿ ಪ್ರಾಧಿಕಾರ ಮತ್ತು ಹೈಸ್ಪೀಡ್ ರೈಲು ಪ್ರಾಧಿಕಾರಗಳ ರಚನೆ ಇವುಗಳ ಮೇಲೆ ಬಜೆಟ್ ತನ್ನ ಗಮನವನ್ನು ಕೇಂದ್ರೀಕರಿಸಲಿದೆ.
ಹೊಸ ಮಾರ್ಗಗಳು, ಹಳಿ ದ್ವಿಗುಣ, ನಿಲ್ದಾಣಗಳ ಪುನರ್ ಅಭಿವೃದ್ಧಿ, ಸುರಕ್ಷೆಯನ್ನು ಮೇಲ್ದರ್ಜೆಗೇರಿಸುವಿಕೆ ಇವೇ ಮುಂತಾದ ಮೂಲಸೌಕರ್ಯ ಅಭಿವೃದ್ಧಿಗೆ ಜೇಟ್ಲಿಯವರು ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ.
ಸರಣಿ ಅಪಘಾತಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ರೈಲ್ವೆಗಾಗಿ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಕೋ.ರೂ.ಗಳ ಸುರಕ್ಷತಾ ನಿಧಿಯ ಸ್ಥಾಪನೆಯನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ, ಈ ಪೈಕಿ 20,000 ಕೋ.ರೂ.ಗಳನ್ನು 2017-18ನೇ ಸಾಲಿಗೆ ನಿಗದಿಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಯಾಣ ಶುಲ್ಕದ ಹೊರತಾಗಿ ಇತರ ಮೂಲಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವ ಕಸರತ್ತಿಗೂ ಬಜೆಟ್ ಒತ್ತು ನೀಡಲಿದೆ. ರೈಲ್ವೆಯ ಒಡೆತನದಲ್ಲಿರುವ ಅಂದಾಜು 48,000 ಹೆಕ್ಟೇರ್ ಖಾಲಿ ಜಾಗದ ಲಾಭದಾಯಕ ಬಳಕೆ, ಖಾಸಗಿ ಸಹಭಾಗಿತ್ವದೊಂದಿಗೆ ನಿಲ್ದಾಣಗಳ ಪುನರ್ ಅಭಿವೃದ್ಧಿ ಇತ್ಯಾದಿಗಳು ಇದರಲ್ಲಿ ಒಳಗೊಂಡಿರಲಿವೆ.







