ಜಲ್ಲಿಕಟ್ಟು ಕಾಯ್ದೆ: ತಡೆಯಾಜ್ಞೆಗೆ ಸುಪ್ರೀಂ ನಕಾರ

ಹೊಸದಿಲ್ಲಿ,ಜ.31: ತಮಿಳುನಾಡಿನ ಗೂಳಿ ಹಿಡಿಯುವ ಕ್ರೀಡೆ ಜಲ್ಲಿಕಟ್ಟುಗೆ ಅನುಮತಿ ನೀಡುವ ತಮಿಳುನಾಡು ಸರಕಾರದ ಕಾಯ್ದೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ಜಲ್ಲಿಕಟ್ಟು ನಿಷೇಧಿಸುವ ತನ್ನ ಆದೇಶವನ್ನು ಉಲ್ಲಂಘಿಸಲು ಜನರಿಗೆ ಅವಕಾಶ ನೀಡಿದ್ದಕ್ಕಾಗಿ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದ್ದುದಕ್ಕಾಗಿ ಸುಪ್ರೀಂಕೋರ್ಟ್ ತಮಿಳುನಾಡು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
‘‘ ನಾಗರಿಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಪ್ರಮುಖವಾದುದೆಂದು ನಿಮ್ಮ ಸರಕಾರಕ್ಕೆ ಹೇಳಿ ಹಾಗೂ ಇಂತಹ ಘಟನೆಗಳನ್ನು ನಾವು ಸಹಿಸಲಾರೆವು’’ ಎಂದು ನ್ಯಾಯಾಲಯವು ತಮಿಳುನಾಡು ಸರಕಾರದ ಪರ ವಕೀಲರಿಗೆ ಕಟುವಾಗಿ ಹೇಳಿತು.
ಗೂಳಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆಯೆಂಬ ಕಾರಣ ನೀಡಿ, ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯನ್ನು ಸುಪ್ರೀಂಕೋರ್ಟ್ 2014ರಲ್ಲಿ ನಿಷೇಧಿಸಿತ್ತು.
ಆದರೆ ಈ ತಿಂಗಳ ಆರಂಭದಲ್ಲಿ ತಮಿಳುನಾಡಿನಾದ್ಯಂತ ವ್ಯಾಪವಾಗಿ ಜಲ್ಲಿಕಟ್ಟು ಪರ ಪ್ರತಿಭಟನೆಗಳು ಭುಗಿಲೆದ್ದ ಕಾರಣ, ರಾಜ್ಯ ಸರಕಾರವು ಶಾಸನವೊಂದನ್ನು ಜಾರಿಗೊಳಿಸಿ, ಈ ಕ್ರೀಡೆಯನ್ನು ನಡೆಸಲು ಅನುಮತಿ ನೀಡಿತ್ತು.





