ಹಿದಾಯ ವಿಶೇಷ ಮಕ್ಕಳ ಪಾಲನಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ, ಜ. 31: ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಮಾನಸಿಕ ಬೆಂಬಲ ನೀಡಿದಲ್ಲಿ ಅವರು ಜೀವನದಲ್ಲಿ ನವಚೈತನ್ಯದೊಂದಿಗೆ ಪುಟಿದೇಳಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಉಸ್ಮಾನ್ ಅಭಿಪ್ರಾಯಪಟ್ಟರು.
ಕಾವಳಕಟ್ಟೆಯ ಹಿದಾಯ ವಿಶೇಷ ಮಕ್ಕಳ ಪಾಲನಾ ಕೇಂದ್ರದ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಣೆಗೈದು ಮಾತನಾಡಿದ ಗಂಡಿಬಾಗಿಲು ಸಿಯೋನ್ ಆಶ್ರಮದ ಸಂಸ್ಥಾಪಕ ಯು.ಸಿ.ಪೌಲೋಸ್, ಸಾಮಾನ್ಯ ಮಕ್ಕಳಿಗೆ ತೋರಿಸುವ ಕಾಳಜಿ, ಪ್ರೀತಿ, ಪ್ರೋತ್ಸಾಹ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಲಭಿಸಿದರೆ ಅವರಿಂದಲೂ ವಿಶೇಷ ಸಾಧನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿದಾಯ ಫೌಂಡೇಶನ್‌ನ ಕೇಂದ್ರ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಝಿಯಾವುದ್ದೀನ್, ಸದಸ್ಯರಾದ ಎಸ್.ಎಂ.ಹಸನ್, ಕೆ.ಎಸ್.ಅಬೂಬಕ್ಕರ್, ಮೊಹಮ್ಮದ್ ಬೆಳ್ಳಚ್ಚಾರ್, ಆಸೀಫ್ ಇಕ್ಬಾಲ್, ಮಕ್ಬೂಲ್ ಅಹಮ್ಮದ್, ರಶೀದ್ ಕಕ್ಕಿಂಜೆ, ಅಬ್ದುಲ್ ಹಮೀದ್ ಜಿ. ಹಾಗೂ ಅಬ್ದುಲ್ ರಝಾಕ್ ಅನಂತಾಡಿ ಉಪಸ್ಥಿತರಿದ್ದರು.
ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ರೇಗೋ ಸ್ವಾಗತಿಸಿದರು.
ಸಹ ಶಿಕ್ಷಕಿ ಆಶಾಲತಾ ವರದಿ ವಾಚಿಸಿದರು. ಶಿಕ್ಷಕಿ ಶಾಕೀರ ಧನ್ಯವಾದವಿತ್ತರು.
ಸಹ ಶಿಕ್ಷಕಿಯರಾದ ಆಯಿಷಾ ಫರ್ಝಾನ ಮತ್ತು ಮುನೀಝಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಯಿತು.







