ಅಕ್ರಮ ಮರಳು ಸಾಗಾಟ: ನಾಲ್ಕು ಪ್ರಕರಣ ದಾಖಲು
ಬಜ್ಪೆ ಪೊಲೀಸರ ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ
ಮಂಗಳೂರು , ಜ.31 : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಮರಳು ಸಾಗಾಟದ ನಾಲ್ಕು ಪ್ರಕರಣಗಳನ್ನು ಮಂಗಳವಾರ ಪತ್ತೆ ಹಚ್ಚಿರುವ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬಜ್ಪೆ ಪೊಲೀಸ್ ಠಾಣಾ ಉಪ ನಿರೀಕ್ಷಕ ಸತೀಶ್ ಎಂ.ಪಿ. ಅವರಿಗೆ ಮಂಗಳೂರಿನಿಂದ ಕೈಕಂಬದ ಕಡೆಗೆ ಲಾರಿಯೊಂದರಲ್ಲಿ ಅಕ್ರಮ ಮರಳು ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಪ್ರವೃತ್ತರಾದ ಅವರು ಕೈಕಂಬ ಕಡೆಗೆ ಹೋಗುತ್ತಿದ್ದ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿದ್ದನಾದರೂ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಪರಾರಿಯಾಗಿರುವ ಲಾರಿ ಚಾಲಕನನ್ನು ಜಾನ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಉಪ ನಿರೀಕ್ಷಕ ಸತೀಶ್ ಅವರು ಲಾರಿ ಮತ್ತು ಅದರಲ್ಲಿ ತುಂಬಿಸಿದ್ದ ಮರಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜ್ಪೆ ಪೊಲೀಸ್ ಠಾಣಾ ನಿರೀಕ್ಷಕ ಟಿ.ಡಿ.ನಾಗರಾಜ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಮೂಳೂರು ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಮರಳನ್ನು ತುಂಬಿಸಿ ಚಾಲನಾ ಸ್ಥಿತಿಯಲ್ಲಿದ್ದ ಟಿಪ್ಪರ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ದಾಳಿಯ ಸಂದರ್ಭದಲ್ಲಿ ಪೊಲೀಸರನ್ನು ಕಂಡ ಟಿಪ್ಪರ್ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಚಾಲಕನನ್ನು ಸಂದೀಪ್ ಎಂದು ಗುರುತಿಸಲಾಗಿದೆ.
ಪೊಲೀಸರು ಮರಳು ಸಹಿತ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಪೊಳಲಿ ದ್ವಾರದ ಬಳಿ ಬೆಳಗ್ಗೆ ಲಾರಿಯೊಂದನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಮರಳು ಕಂಡು ಬಂದಿದೆ. ಚಾಲಕ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಅಕ್ರಮ ಮರಳು ತುಂಬಿದ ಟಿಪ್ಪರ್ ಲಾರಿಯು ಮೂಳೂರು ಗ್ರಾಮದ ಪಲ್ಗುಣಿ ನದಿ ತೀರದಲ್ಲಿ ಮರಳನ್ನು ತುಂಬಿಸಿ ಗುರುಪುರದಿಂದ ಕೈಕಂಬದ ಕಡೆಗೆ ಸಾಗುತ್ತಿದ್ದಾಗ ಪೊಳಲಿ ದ್ವಾರದ ಬಳಿ ಪೊಲೀರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡ್ಡೂರು ಗ್ರಾಮದ ಪಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಲಾರಿಯಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಬಜ್ಪೆ ಠಾಣಾ ಅಪರಾಧ ವಿಭಾಗದ ಪೊಲೀಸ್ ಉಪ ನಿರೀಕ್ಷಕ ರಾಜಾರಾಂ ಅವರು ಫಲ್ಗುಣಿ ನದಿ ತೀರಕ್ಕೆ ತೆರಳಿ ಅಲ್ಲಿ ಮರಳು ತುಂಬಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.







