ಇಂದು ಕೇಂದ್ರ ಬಜೆಟ್: 92 ವರ್ಷಗಳ ಬಳಿಕ ಮೊದಲ ಬಾರಿಗೆ ಕೇಂದ್ರ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಮಂಡನೆ
- ಕ್ಯಾಶ್‌ಲೆಸ್ ವಹಿವಾಟಿಗೆ ಉತ್ತೇಜನ ಸಾಧ್ಯತೆ - 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ - ಜನಪ್ರಿಯ ಕಾರ್ಯಕ್ರಮಗಳ ಘೋಷಣೆಯ ನಿರೀಕ್ಷೆ

ಹೊಸದಿಲ್ಲಿ, ಜ.31: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬುಧವಾರ 2017-18ನೇ ಸಾಲಿನ ಕೇಂದ್ರ ಬಜೆಟನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ನಗದು ಅಮಾನ್ಯತೆ ಹಾಗೂ ಜಿಎಸ್‌ಟಿ ಜಾರಿಯ ಬಳಿಕ ಬಳಿಕ ಮಂಡನೆಯಾಗುತ್ತಿರುವ ಈ ಬಜೆಟ್ ಬಗ್ಗೆ ಭಾರೀ ಕಾತರ ವ್ಯಕ್ತವಾಗಿವೆ. ಇದರ ಜೊತೆಗೆ ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಜನಪ್ರಿಯ ಬಜೆಟ್ ಆಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ.
ಕೇಂದ್ರ ಬಜೆಟ್ ಹಾಗೂ ರೈಲ್ವೆ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸುವ 92 ವರ್ಷಗಳ ಪರಂಪರೆಗೆ ಜೇಟ್ಲಿ ಈ ಸಲ ಮಂಗಳಹಾಡಲಿದ್ದು, ಎರಡೂ ಬಜೆಟ್‌ಗಳನ್ನು ಒಟ್ಟಾಗಿ ಅವರು ಮಂಡಿಸಲಿದ್ದಾರೆ. ಈ ಮೊದಲು ರೈಲ್ವೆ ಬಜೆಟನ್ನು ರೈಲ್ವೆ ಸಚಿವರೇ ಪ್ರತ್ಯೇಕವಾಗಿ ಮಂಡಿಸುತ್ತಿದ್ದರು.
2017-18ನೇ ಸಾಲಿನ ಬಜೆಟ್‌ಗೆ ಸಂಬಂಧಿಸಿ ಈ ಕೆಳಗಿನ ನಿರೀಕ್ಷೆಗಳು ವ್ಯಕ್ತವಾಗಿವೆ.
ಪ್ರಸಕ್ತ ವಿತ್ತ ವರ್ಷದಲ್ಲಿ ನಗದು ಅಮಾನ್ಯ ಹಾಗೂ ಜಿಎಸ್‌ಟಿ ಪ್ರಮುಖ ಪಾತ್ರ ವಹಿಸಲಿರುವುದರಿಂದ ಆದಾಯ ತೆರಿಗೆ ಮಿತಿ ಹಾಗೂ ದರಗಳಲ್ಲಿ ಗಣನೀಯ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ. ನಗದು ಅಮಾನ್ಯದ ಕಾರಣದಿಂದಾಗಿ ಗ್ರಾಹಕರಿಂದ ವ್ಯಯಿಸುವಿಕೆಯು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಬಜೆಟ್‌ನಲ್ಲಿ ತೆರಿಗೆ ಮಿತಿಯನ್ನು ಸಡಿಲುಗೊಳಿಸುವ ಸಾಧ್ಯತೆಯಿದೆ. ಜಿಎಸ್‌ಟಿಯಿಂದಾಗಿ ವ್ಯಾಪಾರಿ ವಲಯದಲ್ಲಿ ಉಂಟಾಗಲಿರುವ ಅಡಚಣೆಯನ್ನು ಗಮನದಲ್ಲಿಟ್ಟುಕೊಂಡು, ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ.
ಸಾರಿಗೆ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಸಾರಿಗೆ ವಲಯದ ನಿಯಮಗಳಲ್ಲಿನ ಸಂದಿಗ್ಧತೆಯನ್ನು ಹೋಗಲಾಡಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸುವ ನಿರೀಕ್ಷೆಯಿದೆ. ಉಬೇರ್ ಹಾಗೂ ಓಲಾದಂತಹ ಕ್ಯಾಬ್ ಸೇವೆಗಳನ್ನು ಆರಂಭಿಸಲು ಸ್ಟಾರ್ಟ್ ಅಪ್ ಉದ್ಯಮಗಳನ್ನು ಬಜೆಟ್‌ನಲ್ಲಿ ಪ್ರೋತ್ಸಾಹಿಸುವ ಸಾಧ್ಯತೆಯಿದೆ.
ನಗದುರಹಿತ ವಹಿವಾಟನ್ನು ಉತ್ತೇಜಿಸುವ ಉದ್ದೇಶದಿಂದ ದೇಶಾದ್ಯಂತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ಈ ಬಜೆಟ್‌ನಲ್ಲಿ ಸ್ಪಷ್ಟವಾದ ಮಾರ್ಗನಕ್ಷೆಯನ್ನು ಪ್ರಕಟಿಸುವುದು ಬಹುತೇಕ ಖಚಿತವಾಗಿದೆ.
ಸ್ಟಾರ್ಟ್ ಅಪ್‌ಗಳಿಗೆ ಪ್ರೋತ್ಸಾಹ ನೀಡಲು ತೆರಿಗೆಯ ವಿನಾಯಿತಿಯ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸುವುದು ಸೇರಿದಂತೆ ಕೆಲವೊಂದು ಮಹತ್ವದ ಕ್ರಮಗಳನ್ನು ಘೋಷಿಸುವ ಸಂಭವವಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಯು ಜನಸಾಮಾನ್ಯರಿಗೆ ಸುಲಭವಾಗಗಿ ಕೈಗೆಟಕುವಂತೆ ಮಾಡಲು ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಮೊಬೈಲ್ ಹ್ಯಾಂಡ್‌ಸೆಟ್ ಸಾಮಾಗ್ರಿಗಳಿಗೆ ತೆರಿಗೆಯಲ್ಲಿ ಭಾರೀ ರಿಯಾಯಿತಿಯನ್ನು ನೀಡುವ ಸಾಧ್ಯತೆಯಿದೆ.
ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರಗಳಲ್ಲಿ ಈ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಈ ಸಲದ ಬಜೆಟ್‌ನಲ್ಲಿ ಕೆಲವೊಂದು ಜನಪ್ರಿಯ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ.
ನೋಟು ನಿಷೇಧದಿಂದಾಗಿ ಕೃಷಿ ಕ್ಷೇತ್ರವು ತೀವ್ರವಾಗಿ ಬಾಧಿತವಾದ ಕಾರಣ, ಕಡಿಮೆ ದರದಲ್ಲಿ ರಸಗೊಬ್ಬರ, ಉತ್ತಮ ನೀರಾವರಿ ಸೌಲಭ್ಯ, ನದಿಗಳ ಜೋಡಣೆ ಹಾಗೂ ಕಡಿಮೆ ದರದಲ್ಲಿ ಬಿತ್ತನೆ ಧಾನ್ಯಗಳು ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಹಲವಾರು ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳು ಅಂತಾರಾಷ್ಟ್ರೀಯ ಉದ್ಯಮ ಮಾರುಕಟ್ಟೆಯಲ್ಲಿ ಭಾರತದ ಪ್ರಗತಿಯನ್ನು ತ್ವರಿತಗೊಳಿಸಲಿದ್ದು, ಭಾರೀ ಹೂಡಿಕೆಯನ್ನು ಆಕರ್ಷಿಸಲಿದೆ. ಈ ಹಿನ್ನೆಲೆಯಲ್ಲಿ ರಸ್ತೆಗಳು, ಹೆದ್ದಾರಿಗಳು, ಬಂದರುಗಳು ಹಾಗೂ ರೈಲ್ವೆ ಮತ್ತಿತರ ಮೂಲಸೌಕರ್ಯಗಳ ತ್ವರಿತ ಅಭಿವೃದ್ಧಿ ಈ ಸಲದ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾಗಳನ್ನು ಘೋಷಿಸುವ ಸಾಧ್ಯತೆಯಿದೆ.
ದೇಶಾದ್ಯಂತ ಹಳ್ಳಿಹಳ್ಳಿಗೂ ನಿರಂತರವಾದ ವಿದ್ಯುತ್ ಸೌಕರ್ಯವನ್ನು ಖಾತರಿಪಡಿಸಲು ಸೌರಶಕ್ತಿ ಉದ್ಯಮಕ್ಕೂ ಬಜೆಟ್‌ನಲ್ಲಿ ಭಾರೀ ರಿಯಾಯಿತಿಗಳನ್ನು ಪ್ರಕಟಿಸುವ ನಿರೀಕ್ಷೆಗಳು ವ್ಯಕ್ತವಾಗಿವೆ.







