ಸಾಸ್ತಾನ: ಟೋಲ್ ಸಂಗ್ರಹದ ವಿರುದ್ಧ ಅಹೋರಾತ್ರಿ ಧರಣಿ

ಕುಂದಾಪುರ, ಜ.31: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳಿಸದೆ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಾಸ್ತಾನ ಗುಂಡ್ಮಿ ಟೋಲ್‌ಗೇಟ್‌ನಲ್ಲಿ ಬುಧವಾರ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಆರಂಭಿಸುತ್ತಿರುವುದನ್ನು ವಿರೋಧಿಸಿ ನೂರಾರು ಸಂಖ್ಯೆಯ ಸಾರ್ವಜನಿಕರು ಇಂದು ಸಂಜೆಯಿಂದ ಟೋಲ್‌ಕೇಂದ್ರ ಎದುರು ವಾಹನಗಳನ್ನು ಅಡ್ಡವಿಟ್ಟು ಅಹೋರಾತ್ರಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಪ್ರತಾಪ್ ಶೆಟ್ಟಿ ಮಾತನಾಡಿ, ಸರ್ವಿಸ್ ರಸ್ತೆಯನ್ನಾಗಲಿ ಚರಂಡಿಯನ್ನಾಗಲಿ ಮಾಡದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅಪಘಾತ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸಂಸದರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ನವಯುಗ ಕಂಪೆನಿ ಕೂಡ ಅಗತ್ಯ ಮೂಲಭೂತ ಸೌಕರ್ಯ ಒದಗಿಸದೆ ವೌನವಾಗಿದೆ. ಇದೀಗ ಏಕಾಏಕಿ ರಾತ್ರೋರಾತ್ರಿ ಟೋಲ್ ಆರಂಭಿಸುವುದಾಗಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಟೀಕಿಸಿದರು.
ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಇಂದು ಪತ್ರಿಕಾ ಹೇಳಿಕೆಯನ್ನು ನೀಡಿ ಏಕಾಏಕಿ ಟೋಲ್ ಸಂಗ್ರಹಕ್ಕೆ ಹೊರಟಿರುವುದು ಕಾನೂನು ಬಾಹಿರ. ಇದಕ್ಕೆ ಕನಿಷ್ಟ 15ದಿನಗಳ ಗಡುವನ್ನಾದರೂ ನೀಡಬೇಕಾಗಿತ್ತು. ಆದರೆ ಇದನ್ನು ನೀಡದೇ ಟೋಲ್ ಸಂಗ್ರಹಕ್ಕೆ ಹೊರಟಿರುವುದು ತಪ್ಪು ಎಂದರು.
ಪೊಲೀಸರು ಕೂಡ ಈ ರೀತಿಯ ಏಕಾಏಕಿ ನಿರ್ಧಾರಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಕೂಡ ಚರ್ಚಿಸಿದ್ದು, ಅವರು ಬೆಂಗಳೂರಿನಲ್ಲಿರುವ ಬಗ್ಗೆ ತಿಳಿಸಿದ್ದಾರೆ. ನಾಳೆ ಅವರು ಜಿಲ್ಲೆಗೆ ಬಂದ ಬಳಿಕ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಧರಣಿಯಲ್ಲಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಹೋರಾಟ ಪ್ರಮುಖ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಆಲ್ವಿನ್ ಅದಾಂದ್ರೆ ಮೊದಲಾದ ವರು ಉಪಸ್ಥಿತರಿದ್ದರು.
ಟೋಲ್ ಸಂಗ್ರಹ ಕೈಬಿಟ್ಟ ನವಯುಗ್
ಜಿಲ್ಲಾಧಿಕಾರಿ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವವರೆಗೆ ಟೋಲ್ ಸಂಗ್ರಹ ಮಾಡಬಾರದೆಂಬ ಪೊಲೀಸರ ಸೂಚನೆಯಂತೆ ನವಯುಗ ಕಂಪೆನಿ ಟೋಲ್ ಸಂಗ್ರಹ ನಿರ್ಧಾರವನ್ನು ಕೈಬಿಟ್ಟಿದೆ.
ಬೆಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳು ನಾಳೆ ಉಡುಪಿಗೆ ಬರಲಿದ್ದು, ಮುಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯುವ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ಟೋಲ್ ಸಂಗ್ರಹ ಮಾಡಲಾಗುತ್ತದೆ. ಅಲ್ಲಿಯವರೆಗೆ ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹಿಸದಂತೆ ಸೂಚಿಸಲಾಗಿದೆ. ಇದಕ್ಕೆ ಅವರು ಒಪ್ಪಿದ್ದಾರೆ. ಅದೇ ರೀತಿ ಪ್ರತಿಭಟನ ಕಾರರಲ್ಲಿಯೂ ಧರಣಿ ಕೈಬಿಡುವಂತೆ ಮನವಿ ಮಾಡಲಾಗಿದೆ
- ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್
ಪ್ರತಿಭಟನಾಕಾರರು 12 ಗಂಟೆಯವರೆಗೆ ಕಾದು ಅಲ್ಲಿ ಟೋಲ್ ಸಂಗ್ರಹ ನಡೆಸುವುದಿಲ್ಲ ಎಂದು ತಿಳಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.







