ನಾನು ನಾಗಪುರದ ಸಂಘವನ್ನು ಮಾತ್ರ ನಂಬುತ್ತೇನೆ: ಪಾರಿಕ್ಕರ್

ಹೊಸದಿಲ್ಲಿ,ಜ.31: ಗೋವಾದ ಮಾಜಿ ಆರೆಸ್ಸೆಸ್ ಮುಖ್ಯಸ್ಥ ಸುಭಾಷ್ ವೆಲಿಂಗಕರ್ ಅವರು ತನಗೆ ಒಡ್ಡಿರುವ ರಾಜಕೀಯ ಸವಾಲಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮಂಗಳವಾರ ನಿರಾಕರಿಸಿದ ಕೇಂದ್ರ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು, ತಾನು ನಾಗಪುರದಲ್ಲಿ ಕೇಂದ್ರಕಚೇರಿಯನ್ನು ಹೊಂದಿರುವ ಸಂಘವನ್ನು ಮಾತ್ರ ನಂಬುತ್ತೇನೆಯೇ ಹೊರತು ಇತರ ಯಾವುದೇ ಸಂಘಟನೆಯನ್ನಲ್ಲ ಎಂದು ಹೇಳಿದರು.
ಗೋವಾದಲ್ಲಿಯ ಸಂಘ ಪರಿವಾರದ ಸಂಪೂರ್ಣ ಬೆಂಬಲ ಬಿಜೆಪಿಗಿದೆ. ವೆಲಿಂಗಕರ್ ಬಗ್ಗೆ ಮಾತನಾಡಲು ನಾನು ಬಯಸುವದಿಲ್ಲ. ಅವರದು ರಾಜಕೀಯ ಪಕ್ಷವಾಗಿದೆ. ಅವರು ತಮ್ಮ ಮತ್ತು ನಾವು ನಮ್ಮ ಅಜೆಂಡಾವನ್ನು ಮುಂದಿಡುತ್ತಿದ್ದೇವೆ. ಆಯ್ಕೆ ಮಾಡಬೇಕಾದವರು ಜನರಾಗಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಗೋವಾದಲ್ಲಿಯ ಸರಕಾರಿ ಅನುದಾನಿತ ಶಾಲೆಗಳಲ್ಲಿ ಮಾಧ್ಯಮ ಭಾಷೆಯ ಕುರಿತು ಪಾರಿಕ್ಕರ್ ಮತ್ತು ಬಿಜಿಪಿಯನ್ನು ಟೀಕಿಸಿದ್ದಕ್ಕಾಗಿ ವೆಲಿಂಗಕರ್ ಅವರನ್ನು ಸಂಘದ ಹುದ್ದೆಯಿಂದ ಕಿತ್ತುಹಾಕಲಾಗಿತ್ತು. ಬಳಿಕ ಅವನ್ನು ಬೆಂಬಲಿಸಿ ರಾಜ್ಯದಲ್ಲಿಯ ಸುಮಾರು 2,000 ಪೂರ್ಣಕಾಲಿಕ ಆರೆಸ್ಸೆಸ್ ಕಾರ್ಯಕರ್ತರು ಸಂಘಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದರು.
ವೆಲಿಂಗಕರ್ ಗೋವಾ ಸುರಕ್ಷಾ ಮಂಚ್ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಎಂಜಿಪಿ ಮತ್ತು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.







