ಮಣಿಪಾಲ:16ಕೆ.ಜಿ.ಬೃಹತ್ ಅಂಡಾಶಯ ಗೆಡ್ಡೆ ಯಶಸ್ವಿ ಶಸ್ತ್ರಚಿಕಿತ್ಸೆ

ಮಣಿಪಾಲ, ಜ.31: ದಾವಣಗೆರೆಯ 69 ವರ್ಷ ವಯಸ್ಸಿನ ಮಹಿಳಾ ರೋಗಿಯ ದೇಹದಲ್ಲಿದ್ದ 16 ಕೆ.ಜಿ. ತೂಕದ ಬೃಹತ್ ಅಂಡಾಶಯದ ಗಡ್ಡೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ.
ರೋಗಿಯನ್ನು ಮಣಿಪಾಲ ಕೆಎಂಸಿ ಕಾಲೇಜು ಮತ್ತು ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ಘಟಕ ಮುಖ್ಯಸ್ಥರಾದ ಡಾ. ಶ್ರೀಪಾದ ಹೆಬ್ಬಾರ್ ಬಳಿಗೆ ಕಳುಹಿಸಲಾಗಿತ್ತು. ರೋಗಿಯನ್ನು ವಿವರವಾಗಿ ಪರೀಕ್ಷಿಸಿದ ವೈದ್ಯರು ಅಲ್ಟ್ರಾಸೌಂಡ್ ಪರೀಕ್ಷೆಗೊಳಪಡಿಸಿದಾಗ ದೊಡ್ಡ ಅಂಡಾಶಯದ ಗೆಡ್ಡೆ ಯನ್ನು ಜ.23ರಂದು ಪತ್ತೆ ಹಚ್ಚಲಾಯಿತು.
ಈ ರೋಗಿ ಕಳೆದ ಸುಮಾರು ಒಂದು ವರ್ಷದಿಂದ ಅಸ್ಪಷ್ಟ ಕಿಬ್ಬೊಟ್ಟೆಯ ಊದುವಿಕೆಯನ್ನು ಹೊಂದಿದ್ದರು. ಅಲ್ಲದೇ ಕಳೆದ ಮೂರು ತಿಂಗಳಲ್ಲಿ ಹಸಿವಿನ ನಷ್ಟ ಮತ್ತು ಸ್ವಲ್ಪತಿಂದರೂ ಹೊಟ್ಟೆ ತುಂಬಿದಂತಹ ಅನುಭವವನ್ನು ಪಡೆಯುತ್ತಿದ್ದರು. ರೋಗಿಗೆ ಗೆಡ್ಡೆಯ ಅನುಭವ ಬಹಳ ಕಾಲದವರೆಗೆ ಬಂದಿರಲಿಲ್ಲ. ಹೀಗಾಗಿ ಡಾ. ಶ್ರೀಪಾದ್ ಹೆಬ್ಬಾರ್, ತಿಂಗಳೊಳಗೆ ಗೆಡ್ಡೆಯ ಕ್ಷಿಪ್ರ ಬೆಳವಣಿಗೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಕ್ಷಣ ಗೆಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸಾ ವಿಧಾನವನ್ನು ಆಯ್ದುಕೊಂಡರು. ಇದಲ್ಲದೆ ರೋಗಿ 30 ವರ್ಷಗಳ ಹಿಂದೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದರೆ ಆ ಸಮಯದಲ್ಲಿ ಅವರ ಅಂಡಾಶಯಗಳನ್ನು ಉಳಿಸಿಕೊಳ್ಳಲಾಗಿತ್ತು.
ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನು ಯೋಜಿಸಿ, ಕಾರ್ಯಗತಗೊಳಿಸಲಾಯಿತು. ಡಾ. ಶ್ರೀಪಾದ್ ಹೆಬ್ಬಾರ್ ನೇತೃತ್ವದ ನುರಿತ ಸ್ತ್ರೀರೋಗ ತಜ್ಞರ ತಂಡ 4 ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಸ್ತ್ರೀರೋಗ ತಜ್ಞ ರಾದ ಡಾ.ಸುಜಾತಾ, ಡಾ.ಸುನಂದಾ ಹಾಗೂ ಡಾ. ನೀತಾ ವರ್ಗೀಸ್ ನೇತೃತ್ವದ ಅರಿವಳಿಕೆ ತಂಡದವರು ಈ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ನೆರವಾದರು.
ಹೊರತೆಗೆಯಲಾದ ಅಂಡಾಶಯದ ಗೆಡ್ಡೆ 35 ಸೆ.ಮಿ.+40 ಸೆ.ಮಿ. ಹಾಗೂ 16 ಕೆಜಿ ತೂಕವಿತ್ತು. ರೋಗಿಯು ಈಗ ಸುಧಾರಿಸಿಕೊಳ್ಳುತ್ತಿದ್ದು, ಇನ್ನು ಕೆಲವೇ ದಿವಸಗಳಲ್ಲಿ ಸಾಮಾನ್ಯ ಜೀವನದತ್ತ ಮರಳಲು ಶಕ್ತರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.(ಕರ್ನಲ್) ಎಂ. ದಯಾನಂದ ಅವರು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ ಡಾ.ಶ್ರೀಪಾದ್ ಹೆಬ್ಬಾರ್ ನೇತೃತ್ವದ ತಂಡವನ್ನು ಅಭಿನಂದಿಸಿದ್ದಾರೆ. ಸಕಾಲದಲ್ಲಿ ವೈದ್ಯಕೀಯ ನೆರವು ಪಡೆಯುವುದು ಮತ್ತು ಎಚ್ಚರಿಕೆಯಿಂದ ಇರುವುದು ಮಾತ್ರ ಇಂತಹ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಗೆಡ್ಡೆಯನ್ನು ತಪ್ಪಿಸಲು ಇರುವ ಏಕೈಕ ಮಾರ್ಗ ಎಂದವರು ಅಭಿಪ್ರಾಯಪಟ್ಟಿದ್ದಾರೆ.







