ಅಪಘಾತ: ಬೈಕ್ ಸವಾರ ಸಾವು
ಸಾಗರ, ಜ.31: ತಾಲೂಕಿನ ತ್ಯಾಗರ್ತಿ ಸಮೀಪದ ಲ್ಯಾವಿಗೆರೆ ವೃತ್ತದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಸಾಗರದ ಜೆ.ಪಿ. ನಗರ ನಿವಾಸಿಗಳಾದ ಅರುಣಕುಮಾರ್ ಮತ್ತು ಗಣೇಶ್ ಎಂಬವರು ಶಿಕಾರಿಪುರದಿಂದ ಸಾಗರಕ್ಕೆ ಬೈಕ್‌ನಲ್ಲಿ ಬರುತ್ತಿದ್ದರು.
ತ್ಯಾಗರ್ತಿ ಸಮೀಪದ ಲ್ಯಾವಿಗೆರೆ ವೃತ್ತದಲ್ಲಿ 8ಕ್ಕೂ ಹೆಚ್ಚು ಜಾನುವಾರು ರಸ್ತೆಯಲ್ಲಿ ಓಡಿ ಅಡ್ಡ ಬಂದಿವೆ. ಜಾನುವಾರುಗಳನ್ನು ತಪ್ಪಿಸಲು ಹೋಗಿ ಬೈಕ್ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಸ್ವರೂಪವಾಗಿ ಗಾಯಗೊಂಡಿದ್ದ ಹಿಂಬದಿ ಬೈಕ್ ಸವಾರ ಅರುಣಕುಮಾರ್(20)ನನ್ನು ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳಿಸಲಾಗಿತ್ತು. ಶಿವಮೊಗ್ಗದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅರುಣಕುಮಾರ್ ಅವರು ಮೃತಪಟ್ಟಿರುತ್ತಾರೆ. ಬೈಕ್ ಸವಾರ ಗಣೇಶ್ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಸೂಕ್ತ ಚಿಕಿತ್ಸೆ ನೀಡಿಲ್ಲ: ಆರೋಪ
ಗಾಯಾಳು ಅರುಣಕುಮಾರ್ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತಂದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಸೂಕ್ತ ತಪಾಸಣೆ ನಡೆಸಿ, ಚಿಕಿತ್ಸೆ ನೀಡದಿರುವುದು ಸಾವಿಗೆ ಕಾರಣವಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಆರ್. ಶ್ರೀನಿವಾಸ್ ದೂರಿದ್ದಾರೆ.
ಅರುಣಕುಮಾರ್ ಅವರು ಗಂಭೀರ ಸ್ಥಿತಿಯಲ್ಲಿದ್ದಾಗ್ಯೂ ಅವರನ್ನು ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆಗೆ ಒಳಪಡಿಸದೆ ಉಪವಿಭಾಗೀಯ ಆಸ್ಪತ್ರೆಯಲ್ಲಿಯೇ ಇರಿಸಿಕೊಂಡಿದ್ದಾರೆ. ಮೂರ್ನಾಲ್ಕು ಗಂಟೆಯ ನಂತರ ಅರುಣಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ.







