ಧೂಮಪಾನ, ನಿಯಮಬಾಹಿರ ತಂಬಾಕು ಉತ್ಪನ್ನ ಮಾರಾಟ 98 ಪ್ರಕರಣ ದಾಖಲು, 10,350 ರೂ. ದಂಡ ವಸೂಲಿ
ಶಿವಮೊಗ್ಗ, ಜ. 31: ಶಿವಮೊಗ್ಗ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದವರು ಹಾಗೂ ನಿಯಮಕ್ಕೆ ವಿರುದ್ಧವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಸ್ಥಳಗಳ ಮೇಲೆ ಮಂಗಳವಾರ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡಗಳು ಪೊಲೀಸರ ಸಹಯೋಗದೊಂದಿಗೆ ವಿವಿಧೆಡೆ ದಿಢೀರ್ ದಾಳಿ ನಡೆಸಿ, ಸಾಲುಸಾಲು ಪ್ರಕರಣ ದಾಖಲಿಸಿ ಸಾವಿರಾರು ರೂ. ದಂಡ ವಸೂಲಿ ಮಾಡಿದ ಘಟನೆ ವರದಿಯಾಗಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣಾಧಿಕಾರಿಯೂ ಆದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ. ಬಿ. ಎನ್. ಶಂಕರಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ಐದು ತಂಡಗಳು ಏಕಕಾಲಕ್ಕೆ ನಗರದ ವಿವಿಧೆಡೆ ಕಾರ್ಯಾಚರಣೆಗಿಳಿದವು. ಬೆಳಗ್ಗೆ ಸುಮಾರು 11 ಗಂಟೆಗೆ ಆರಂಭವಾದ ಕಾರ್ಯಾಚರಣೆಯು ಮಧ್ಯಾಹ್ನ 3 ಗಂಟೆಯವರೆಗೂ ನಡೆಯಿತು.
ಒಟ್ಟು 98 ಪ್ರಕರಣ ದಾಖಲಿಸಿ, 10,350 ರೂ.ದಂಡದ ರೂಪದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬೀಡಿ-ಸಿಗರೇಟ್ ಸೇದುವವರಿಗೆ, ‘ಕೊಟ್ಪಾ’ ಕಾಯ್ದೆಗೆ ವಿರುದ್ಧ್ದವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ, ಉತ್ತೇಜನ ನೀಡುವವರಿಗೆ ಹಾಗೂ ಧೂಮಪಾನ ಮಾಡಲು ಅವಕಾಶ ಕಲ್ಪಿಸಿದವರಿಗೆ ಚುರುಕು ಮುಟ್ಟಿಸುವ ಕೆಲಸ ನಡೆಯಿತು.
ಏಕಕಾಲಕ್ಕೆ ನಗರದ ಹಲವೆಡೆ ಈ ದಾಳಿಗಳು ನಡೆದಿದ್ದು, ನಾಗರಿಕರ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ತಬ್ಬಿಬ್ಬು: ಅಧಿಕಾರಿಗಳ ತಂಡಗಳು ಬಾರ್-ರೆಸ್ಟೋರೆಂಟ್, ಹೊಟೇಲ್, ಪೆಟ್ಟಿಗೆ ಅಂಗಡಿ, ಸಿನೆಮಾ ಥಿಯೇಟರ್, ಬಸ್‌ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದವು. ಈ ವೇಳೆ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಡೆಸುತ್ತಿದ್ದವರು ದಂಡ ತೆರುವಂತಾಯಿತು.
ಮತ್ತೆ ಕೆಲವರು ಅಧಿಕಾರಿಗಳನ್ನು ಗಮನಿಸಿ ಸ್ಥಳದಿಂದ ಕಾಲ್ಕಿತ್ತ ಪ್ರಕರಣಗಳು ಕೂಡ ವರದಿಯಾಗಿವೆ. ತಮ್ಮ ಹೊಟೇಲ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ಮಾಡಿಕೊಟ್ಟಿದ್ದ ಹಲವು ಮಾಲಕರುಗಳ ವಿರುದ್ಧವು ಅಧಿಕಾರಿಗಳು ದಂಡ ಪ್ರಯೋಗ ನಡೆಸಿದ್ದಾರೆ.
ಕಟ್ಟುನಿಟ್ಟಾಗಿ ‘ಕೊಟ್ಪಾ’ಕಾಯ್ದೆ ಅನುಷ್ಠಾನಕ್ಕೆ ಪ್ರಯತ್ನ’
ರಾಷ್ಟ್ರೀಯ ತಂಬಾಕು ನಿಯಂತ್ರಣಾಧಿಕಾರಿ ಡಾ. ಬಿ. ಎನ್. ಶಂಕರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ‘ಕೊಟ್ಪಾ’ಕಾಯ್ದೆ ಅನುಷ್ಠಾನಕ್ಕೆ ತರಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅದರಂತೆ ಮಂಗಳವಾರ ಪೊಲೀಸರ ನೆರವಿನೊಂದಿಗೆ ಐದು ತಂಡಗಳಲ್ಲಿ ಏಕಕಾಲಕ್ಕೆ ಶಿವಮೊಗ್ಗ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.







