ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಸರಣಿ: ಫಿಂಚ್ ನಾಯಕ

ಮೆಲ್ಬೋರ್ನ್, ಜ.31: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೊನ್ ಫಿಂಚ್ ಆಸ್ಟ್ರೇಲಿಯದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಟ್ವೆಂಟಿ-20 ಸರಣಿ ಫೆ.17 ರಂದು ನಿಗದಿಯಾಗಿದ್ದು, ಫಿಂಚ್‌ಗೆ ಎರಡನೆ ಬಾರಿ ನಾಯಕತ್ವದ ಹೊಣೆಗಾರಿಕೆವಹಿಸಲಾಗಿದೆ. 2014 ಹಾಗೂ 2016ರ ನಡುವೆ ಆಸ್ಟ್ರೇಲಿಯದ ಪರ ಆರು ಟ್ವೆಂಟಿ-20 ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡಿರುವ ಫಿಂಚ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಹೊರ ನಡೆದ ಕಾರಣ ನ್ಯೂಝಿಲೆಂಡ್ ವಿರುದ್ಧ ಆಕ್ಲಂಡ್‌ನಲ್ಲಿ ಸೋಮವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಇದೇ ಸಮಯದಲ್ಲಿ ನಡೆಯುವ ಭಾರತ ಪ್ರವಾಸದಲ್ಲಿ ಸ್ಟೀವನ್ ಸ್ಮಿತ್ ಆಸ್ಟ್ರೇಲಿಯದ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಭಾರತಕ್ಕೆ ಟೆಸ್ಟ್ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್, ಉಸ್ಮಾನ್ ಖ್ವಾಜಾ, ಮಿಚೆಲ್ ಸ್ಟಾರ್ಕ್, ಜೊಶ್ ಹೇಝಲ್‌ವುಡ್ ಹಾಗೂ ಮ್ಯಾಥ್ಯೂಸ್ ವೇಡ್ ಟ್ವೆಂಟಿ-20 ಸರಣಿಯಲ್ಲಿ ಲಭ್ಯವಿರುವುದಿಲ್ಲ.
ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಫಿಂಚ್ ನಾಯಕನಾಗಿ ಆಯ್ಕೆಯಾಗಿದ್ದರೆ, ಜಸ್ಟಿನ್ ಲ್ಯಾಂಗರ್ ಮುಖ್ಯ ಕೋಚ್ ಆಗಿಯೂ, ಮಾಜಿ ಟೆಸ್ಟ್ ಆಟಗಾರರಾದ ರಿಕಿ ಪಾಂಟಿಂಗ್(ಬ್ಯಾಟಿಂಗ್) ಹಾಗೂ ಜೇಸನ್ ಗಿಲ್ಲೆಸ್ಪಿ(ಬೌಲಿಂಗ್) ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.







