ಅಝರ್ ಅಲಿಗೆ ಪಾಕ್ ಅಭಿಮಾನಿಗಳ ಮೂದಲಿಕೆ

ಲಾಹೋರ್, ಜ.31: ಪಾಕಿಸ್ತಾನದ ಏಕದಿನ ತಂಡದ ನಾಯಕ ಅಝರ್ ಅಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಅಭಿಮಾನಿಗಳು ಮೂದಲಿಸಿರುವ ಘಟನೆ ನಡೆದಿದೆ.
ಆಸ್ಟ್ರೇಲಿಯ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿರುವ ಅಲಿ ನೇತೃತ್ವದ ಪಾಕ್ ಆಟಗಾರರು ಲಾಹೋರ್‌ಗೆ ಬಂದಿಳಿದರು. ಅಲಿ ಲಾಹೋರ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಿಂದ ಹೊರ ಬಂದ ಕೂಡಲೆ ಅಭಿಮಾನಿಗಳ ಗುಂಪು ಅಲಿ ಅವರನ್ನು ಮೂದಲಿಸಿದ್ದಲ್ಲದೆ ‘‘ನೀವು ನಾಯಕತ್ವವನ್ನು ತ್ಯಜಿಸಬೇಕು’ ಎಂದು ಆಗ್ರಹಿಸುತ್ತಿರುವ ದೃಶ್ಯವನ್ನು ಟಿವಿ ಚಾನಲ್‌ಗಳು ಸೆರೆ ಹಿಡಿದಿದ್ದವು.
ಪಾಕ್‌ನ ಏಕದಿನ ನಾಯಕತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಅಲಿಗೆ ಅಭಿಮಾನಿಗಳು ಮೂದಲಿಸುತ್ತಿರುವ ದೃಶ್ಯವನ್ನು ಚಾನಲ್‌ಗಳು ಬಿತ್ತರಿಸುತ್ತಿವೆ. ಇದು ಅವರಿಗೆ ಮುಜುಗರವುಂಟು ಮಾಡಿದೆ.
ಪಾಕಿಸ್ತಾನ ಏಕದಿನ ತಂಡ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿರುವ ಕಾರಣ ತಂಡದಲ್ಲಿ ಬದಲಾವಣೆ ತಂದು, ಹೊಸ ನಾಯಕನನ್ನು ಆಯ್ಕೆ ಮಾಡಬೇಕೆಂಬ ಕೂಗು ಕೇಳಿಬರಲಾರಂಭಿಸಿದೆ.
ಪಾಕಿಸ್ತಾನ ತಂಡ ನ್ಯೂಝಿಲೆಂಡ್ ವಿರುದ್ಧ ಎರಡೂ ಟೆಸ್ಟ್‌ನ್ನು ಸೋತಿತ್ತು. ಒಂದು ಪಂದ್ಯವನ್ನು ಅಝರ್ ನಾಯಕತ್ವದಲ್ಲಿ ಸೋತಿತ್ತು. ಆಸ್ಟ್ರೇಲಿಯ ಪ್ರವಾಸದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು. ಮುಹಮ್ಮದ್ ಹಫೀಝ್ ನಾಯಕತ್ವದಲ್ಲಿ ಆಸೀಸ್‌ನ ವಿರುದ್ಧ ಏಕೈಕ ಏಕದಿನ ಪಂದ್ಯವನ್ನು ಪಾಕ್ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಅಝರ್ ಆಡಲು ಫಿಟ್ ಇರಲಿಲ್ಲ.







