ಬಾಂಗ್ಲಾ ವಿರುದ್ಧ ಏಕೈಕ ಟೆಸ್ಟ್‌ಗೆ ಭಾರತ ತಂಡ ಪ್ರಕಟ
ಅಭಿನವ್ ಮುಕುಂದ್‌ಗೆ ಕರೆ, ಶಿಖರ್ ಧವನ್‌ಗೆ ಕೊಕ್

ಹೊಸದಿಲ್ಲಿ, ಜ.31: ತಮಿಳುನಾಡಿನ ಆರಂಭಿಕ ಆಟಗಾರ ಅಭಿನವ್ ಮುಕುಂದ್ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮುಕುಂದ್ ಸುಮಾರು ಆರು ವರ್ಷಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ.
ಫೆ.9 ರಿಂದ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ-ಭಾರತದ ನಡುವೆ ಮೊತ್ತ ಮೊದಲ ಬಾರಿ ನಡೆಯಲಿರುವ ಪಂದ್ಯಕ್ಕಾಗಿ 16 ಸದಸ್ಯರನ್ನು ಒಳಗೊಂಡ ಭಾರತೀಯ ಕ್ರಿಕೆಟ್ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗಿದೆ.
ತಂಡದ ಆಯ್ಕೆ ಸಮಿತಿ ಸಭೆ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿತ್ತು. ವಿನೋದ್ ರಾಯ್ ನೇತೃತ್ವದ ಬಿಸಿಸಿಐನ ನೂತನ ಆಯ್ಕೆ ಆಡಳಿತಾಧಿಕಾರಿಗಳ ಸಮಿತಿ ಜೊತೆ ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಸಭೆ ನಡೆಸಲು ಅವಕಾಶ ನಿರಾಕರಿಸಿದ ಕಾರಣ ಸಭೆಯು ಆರು ಗಂಟೆ ವಿಳಂಬವಾಗಿ ನಡೆಯಿತು. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಹಲವು ಫೋನ್ ಕರೆಗಳು ಹಾಗೂ ಇ-ಮೇಲ್‌ಗಳ ವಿನಿಮಯವಾದವು.
ಭಾರತೀಯ ತಂಡದ ಹೆಚ್ಚುವರಿ ಮೂರನೆ ಆರಂಭಿಕ ಆಟಗಾರನಾಗಿ ಶಿಖರ್ ಧವನ್ ಬದಲಿಗೆ ಅಭಿನವ್ ಮುಕುಂದ್ ಅವರು ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಮುಕುಂದ್ ಇತ್ತೀಚೆಗೆ ಕೊನೆಗೊಂಡ ರಣಜಿ ಟ್ರೋಫಿ ಋತುವಿನಲ್ಲಿ 65.30ರ ಸರಾಸರಿಯಲ್ಲಿ 14 ಇನಿಂಗ್ಸ್‌ಗಳಲ್ಲಿ ಒಟ್ಟು 849 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 3 ಅರ್ಧಶತಕಗಳಿವೆ. ಮುಕುಂದ್ 2011ರಲ್ಲಿ ಕೊನೆಯ ಬಾರಿ ಭಾರತದ ಪರ ಆಡಿದ್ದರು.
ಈ ಹಿಂದೆ ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಮುಕುಂದ್ ಆಯ್ಕೆಯಾಗಿದ್ದರು. ಇರಾನಿ ಕಪ್ ಫೈನಲ್‌ನಲ್ಲಿ ಅಜೇಯ ದ್ವಿಶತಕ ಬಾರಿಸಿ ತನ್ನ ಫಿಟ್‌ನೆಸ್ ಹಾಗೂ ಫಾರ್ಮ್‌ನ್ನು ಸಾಬೀತುಪಡಿಸಿರುವ ಕೋಲ್ಕತಾದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ದಿಮಾನ್ ಸಹಾ ಅವರು ಪಾರ್ಥಿವ್ ಪಟೇಲ್ ಬದಲಿಗೆ ತಂಡಕ್ಕೆ ವಾಪಸಾಗಿದ್ದಾರೆ. ಇದೀಗ ಟೆಸ್ಟ್ ತಂಡದಿಂದ ಹೊರಗುಳಿದಿರುವ ಪಾರ್ಥಿವ್ ಪಟೇಲ್ ರಣಜಿ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿ ಗುಜರಾತ್ ತಂಡ ಚೊಚ್ಚಲ ಟ್ರೋಫಿ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು.
ಮುಂಬೈ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ, ಜಯಂತ್ ಯಾದವ್, ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ. ಕಳಪೆ ಫಾರ್ಮ್‌ನಲ್ಲಿರುವ ದಿಲ್ಲಿಯ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇನ್ನುಳಿದಂತೆ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.
ನಾಲ್ವರು ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ ಹಾಗೂ ಜಯಂತ್ ಯಾದವ್, ನಾಲ್ವರು ವೇಗಿಗಳಾದ ಇಶಾಂತ್ ಶರ್ಮ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಂಡಿನೋವಿನ ಬಳಿಕ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಬಂಗಾಲದ ವೇಗದ ಬೌಲರ್ ಮುಹಮ್ಮದ್ ಶಮಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಶಮಿ ಇಂಗ್ಲೆಂಡ್ ವಿರುದ್ಧದ ಮೂರನೆ ಟೆಸ್ಟ್‌ನ ಬಳಿಕ ತಂಡದಲ್ಲಿ ಆಡಿಲ್ಲ.
ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಕರುಣ್ ನಾಯರ್ ಹಾಗೂ ರವೀಂದ್ರ ಜಡೇಜ ನಿರೀಕ್ಷೆಯಂತೆಯೇ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಆಗಮಿಸುತ್ತಿದೆ.
ಟೆಸ್ಟ್ ತಂಡ: ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಇಶಾಂತ್ ಶರ್ಮ, ಉಮೇಶ್ ಯಾದವ್, ಅಮಿತ್ ಮಿಶ್ರಾ, ಅಭಿನವ್ ಮುಕುಂದ್, ಭುವನೇಶ್ವರ ಕುಮಾರ್, ಕರುಣ್ ನಾಯರ್ ಹಾಗೂ ಹಾರ್ದಿಕ್ ಪಾಂಡ್ಯ.







