ಅಂಪೈರ್ ಕಳಪೆ ತೀರ್ಪು ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಬುಮ್ರಾ
ಬೆಂಗಳೂರು, ಜ.31: ‘‘ನಾವು ಅಂಪೈರ್‌ಗಳು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಹೆಚ್ಚು ಗಮನ ನೀಡಲಾರೆವು. ಕೆಲವೊಮ್ಮೆ ಅದು(ಅಂಪೈರ್ ನಿರ್ಧಾರ) ನಮ್ಮ ಪರವಾಗಿರುತ್ತದೆ. ಇನ್ನೂ ಕೆಲವೊಮ್ಮೆ ವಿರುದ್ಧವಾಗಿರುತ್ತದೆ. ಇಂತಹ ಘಟನೆಗಳು ಕ್ರಿಕೆಟ್‌ನಲ್ಲಿ ನಡೆಯುತ್ತಿರುತ್ತವೆೆ. ಹೀಗಾಗಿ ನಾವು ಅದರ ಬಗ್ಗೆ ಯೋಚಿಸದೇ ಮುಂದುವರಿಯಬೇಕು’’ ಎಂದು ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮಂಗಳವಾರ ಅಭಿಪ್ರಾಯಪಟ್ಟರು.
ನಾಗ್ಪುರದಲ್ಲಿ ರವಿವಾರ ನಡೆದ ದ್ವಿತೀಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೇಸರ ವ್ಯಕ್ತಪಡಿಸಿದ್ದರು.ಈ ಮೂಲಕ ಅಂಪೈರ್ ತೀರ್ಪಿನ ವಿಷಯಕ್ಕೆ ಸಂಬಂಧಿಸಿ ವಿವಾದ ತಲೆ ಎತ್ತಿತ್ತು.
2ನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರವಾಸಿಗರು ಕೇವಲ 5 ರನ್‌ಗಳ ಅಂತರದಿಂದ ಸೋತಿದ್ದರು. ಜೋ ರೂಟ್ ಕೊನೆಯ ಓವರ್‌ನಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದಿದ್ದರು. ಬ್ಯಾಟ್ಸ್‌ಮನ್ ಬ್ಯಾಟ್‌ಗೆ ಚೆಂಡು ತಾಗಿದ್ದರೂ ಅಂಪೈರ್ ಸಿ. ಸಂಶುದ್ದೀನ್ ಔಟ್ ತೀರ್ಪು ನೀಡಿದ್ದರು. ಹಿರಿಯ ವೇಗದ ಬೌಲರ್ ಆಶೀಷ್ ನೆಹ್ರಾರಿಂದ ಅಮೂಲ್ಯ ಸಲಹೆ ಪಡೆಯುತ್ತಿರುವೆ ಎಂದು ಹೇಳಿದ ಬುಮ್ರಾ,‘‘ನಾನು ಅವರೊಂದಿಗೆ ಟ್ವೆಂಟಿ-20 ವಿಶ್ವಕಪ್ ಸಹಿತ ಕೆಲವು ಪಂದ್ಯಗಳನ್ನು ಆಡಿರುವೆ. ಅವರು ಸಾಕಷ್ಟು ಸಂಖ್ಯೆಯ ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಕಾರಣದಿಂದ ಅವರ ಸಲಹೆ ಅಮೂಲ್ಯವಾಗಿತ್ತು. ಅವರು ನನ್ನೊಂದಿಗೆ ಅನುಭವ ಹಂಚಿಕೊಂಡಿದ್ದಾರೆ’’ ಎಂದು ಹೇಳಿದ್ದಾರೆ.







