ಭಕ್ತರ ಸೋಗಿನಲ್ಲಿ ಬಂದು ಅನೈತಿಕ ಚಟುವಟಿಕೆ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ: ಖಂಡನೆ
ಸುಬ್ರಹ್ಮಣ್ಯ, ಜ.31: ಕುಕ್ಕೆ ಸುಬ್ರಹ್ಮಣ್ಯ ಧಾರ್ಮಿಕ ಕ್ಷೇತ್ರ ದೇಶದಲ್ಲೇ ಹೆಸರುವಾಸಿಯಾದ ಶ್ರದ್ಧಾ ಕೇಂದ್ರವಾಗಿದ್ದು, ನಾಗದೋಷ ಪರಿಹಾರಕ್ಕಾಗಿ ಜಾತಿ,ಧರ್ಮ ಭೇದವಿಲ್ಲದೆ ಎಲ್ಲರೂ ಬಂದು ಶ್ರದ್ಧಾ ಭಕ್ತಿಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಕೆಲವರು ಭಕ್ತರ ಸೋಗಿನಲ್ಲಿ ಕ್ಷೇತ್ರಕ್ಕೆ ಬಂದು ಅನಕೃತ ವಸತಿ ಗೃಹಗಳಲ್ಲಿ ಬಾಡಿಗೆ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಈ ಮೂಲಕ ಕ್ಷೇತ್ರದ ಪಾವಿತ್ರಕ್ಕೆ ಧಕ್ಕೆ ತರುವ ಹುನ್ನಾರ ಖಂಡನೀಯ. ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವ ಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಕಿಶೋರ್ ಕುಮಾರ್ ಶಿರಾಡಿ ಹೇಳಿದರು.
ಹಿಂದೂ ಹಿತ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಕಣ್ಮುಚ್ಚಿ ಕುಳಿತಿರುವುದು ಶೋಚನೀಯ ಇದನ್ನು ನಾವು ಖಂಡಿಸುತ್ತೇವೆ. ಇಂತಹ ಘಟನೆ ಗಳು ನಡೆಯದಂತೆ ಪೊಲೀಸ್ ಇಲಾಖೆ ಜಾಗೃತವಾಗಬೇಕು. ಅಲ್ಲದೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಅವರು ಹೇಳಿದರು.
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಜಯಪ್ರಕಾಶ್ ಕೂಜುಗೋಡು, ಬೆಂಗಳೂರು ನಗರ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಯಶವಂತ್, ಹಿಂದೂ ಹಿತ ರಕ್ಷಣಾ ವೇದಿಕೆಯ ಸದಸ್ಯೆ ಲತಾ ಕುಮಾರಧಾರಾ, ಅಶೋಕ್ ಆಚಾರ್, ಶ್ರೀಕುಮಾರ ಬಿಲದ್ವಾರ ಸುಬ್ರಹ್ಮಣ್ಯ, ಮನೋಜ್ ಕುಮಾರ್ ದೇವರಗದ್ದೆ, ಮೋಹನ್‌ರಾಜ್, ಚಿದಾನಂದ ಕಂದಡ್ಕ ಉಪಸ್ಥಿತರಿದ್ದರು.







