ದೂರವಾಣಿ ಕರೆಯನ್ನೂ ದೂರು ಎಂದು ಪರಿಗಣಿಸಬೇಕು: ನೂತನ ಡಿಜಿಪಿ ದತ್ತ

ಬೆಂಗಳೂರು, ಫೆ.1: ದೂರವಾಣಿ ಕರೆ ಮಾಡಿ ದೂರು ನೀಡಿದರೂ ಅದನ್ನು ಅಧಿಕೃತ ದೂರು ಎಂದು ಪರಿಗಣಿಸಬೇಕು ಎಂದು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಒಂದು ವರ್ಷಕ್ಕೂ ಕಡಿಮೆ ಅಧಿಕಾರಾವಧಿ ಹೊಂದಿರುವ ಅವರು ತುರ್ತಾಗಿ ತಮ್ಮ ಯೋಜನೆಗಳನ್ನು ಅನುಷ್ಠಾಗೊಳಿಸಲು ಮುಂದಾಗಿದ್ದು, ತನಿಖೆಯಲ್ಲಿ ಸುಧಾರಣೆ ಹಾಗೂ ಪೊಲೀಸ್ ಪಡೆ, ಪ್ರಕರಣ ದಾಖಲಾಗುವರೆಗೂ ಕಾಯದೇ ಸ್ವ-ಇಚ್ಛೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಸಕ್ರಿಯ ಪಡೆಯಾಗಿ ಇದನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನೂತನ ಡಿಜಿ ಜತೆ ನಡೆಸಿದ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.
ಸೇವೆಯ ಬಹಳಷ್ಟು ಅವಧಿಯನ್ನು ಬೇರೆ ರಾಜ್ಯಗಳಲ್ಲಿ ಕಳೆದಿರುವುದು ಮತ್ತು ಕರ್ನಾಟಕದ ಸಂಪರ್ಕವೇ ಇಲ್ಲದಿರುವುದು ಕೆಲಮಟ್ಟಿಗೆ ತೊಡಕಾಗಿ ಪರಿಣಮಿಸಬಹುದು. ಆದರೆ ಅದು ಅನುಕೂಲ ಕೂಡಾ. ಯಾರ ಬಗ್ಗೆಯೂ ವೈಯಕ್ತಿಕ ಒಲವುಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಭವಿಸುವ ಸಣ್ಣ ಘಟನೆ ಕೂಡಾ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮಹಿಳೆಯರ ಸುರಕ್ಷತೆಗೆ ಹೆಚ್ಚು ಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳಿವೆಯೇ ಎಂದು ಕೇಳಿದ ಪ್ರಶ್ನೆಗೆ, "ಮುಖ್ಯವಾಗಿ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಮನೋಪ್ರವೃತ್ತಿ ಬದಲಾಗಬೇಕು. ಮಹಿಳೆಯರ ಸುರಕ್ಷತೆ ವಿಚಾರ ಬಂದಾಗ ಪೊಲೀಸರು ಕ್ರಿಯಾತ್ಮಕವಾಗಿ ಸ್ಪಂದಿಸಬೇಕು. ಗಂಭೀರ ಪ್ರಕರಣಗಳಲ್ಲಿ ದೂರವಾಣಿ ಕರೆಯನ್ನೇ ದೂರಾಗಿ ಪರಿಗಣಿಸಬೇಕು. ಶೇಕಡ 80ರಷ್ಟು ಪೊಲೀಸರಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ ಹುದ್ದೆಗಳಿದ್ದು, ಅವರಿಗೆ ಹೆಚ್ಚಿನ ಗೌರವ ಹಾಗೂ ಹೊಣೆಗಾರಿಕೆ ನೀಡಬೇಕು" ಎಂದು ಅಭಿಪ್ರಾಯಪಟ್ಟರು.







