ಹಣಕಾಸು ವಂಚನೆ ಕಾಯ್ದೆಗೆ ಮಾಜಿ ಸಚಿವ ಮೊದಲ ಬಲಿ

ಹೊಸದಿಲ್ಲಿ, ಫೆ.1: ಹಣಕಾಸು ವಂಚನೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಜಾರ್ಖಂಡ್‌ನಲ್ಲಿ ಮಧುಕೋಡಾ ಸರಕಾರದಲ್ಲಿ ಸಚಿವರಾಗಿದ್ದ ಸಚಿವ ಹರಿನಾರಾಯಣ ರಾಯ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಕಾಯ್ದೆಯಡಿ ಶಿಕ್ಷೆಗೆ ಒಳಗಾಗುತ್ತಿರುವ ಪ್ರಪ್ರಥಮ ವ್ಯಕ್ತಿ ಎಂಬ ಕುಖ್ಯಾತಿಗೆ ಇವರು ಪಾತ್ರರಾಗಿದ್ದಾರೆ. ಹರಿನಾರಾಯಣ ರಾಯ್‌ಗೆ ಸೋಮವಾರ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಎಂಟು ವರ್ಷಗಳ ಹಿಂದೆ ಕಾನೂನು ಜಾರಿ ನಿರ್ದೇಶನಾಲಯ ಇವರ ವಿರುದ್ಧ ತನಿಖೆ ಆರಂಭಿಸಿತ್ತು. 3.72 ಕೋಟಿ ರೂಪಾಯಿ ವಂಚನೆ ಜಾಲದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಿಎಂಎಲ್‌ಎ ಕಾಯ್ದೆಯಡಿ ಗರಿಷ್ಠ ಶಿಕ್ಷೆಯನ್ನು ಆರೋಪಿಗೆ ವಿಧಿಸಲಾಗಿದೆ. ಐದು ಲಕ್ಷ ರೂಪಾಯಿ ದಂಡ ವಿಧಿಸಲು ತಪ್ಪಿದಲ್ಲಿ ಒಂದೂವರೆ ವರ್ಷ ಹೆಚ್ಚುವರಿ ಜೈಲು ಶಿಕ್ಷೆ ನೀಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜುನ ಮುಂಡ, ಮಧುಕೋಡಾ ಮತ್ತು ಶಿಬುಸೊರೆನ್ ಅಧಿಕಾರಾವಧಿಯಲ್ಲಿ ಅಂದರೆ 2005ರಿಂದ 2008ರವರೆಗೆ ರಾಯ್ ಸಚಿವರಾಗಿದ್ದರು. ಪ್ರವಾಸೋದ್ಯಮ, ನಗರಾಭಿವೃದ್ಧಿ ಹಾಗೂ ಪರಿಸರ & ಅರಣ್ಯ ಖಾತೆಯನ್ನು ನಿಭಾಯಿಸಿದ್ದರು. ಹಲವು ಮಂದಿ ಮಾಜಿ ಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧವೂ ಪಿಎಂಎಲ್‌ಎ ಕಾಯ್ದೆಯಡಿ ಕಾನೂನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.





