ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್
ಅಗಲಿದ ಸಂಸದ ಇ.ಅಹ್ಮದ್ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ಬಳಿಕ ಬಜೆಟ್ ಮಂಡನೆ * ಬಜೆಟ್ ಮಂಡನೆ ನಾಳೆಗೆ ಮುಂದೂಡಲು ಶಿವಸೇನೆ, ಕೇರಳದ ಸಂಸದರ ಒತ್ತಾಯ

ಹೊಸದಿಲ್ಲಿ, ಫೆ.1: ವಾಡಿಕೆಗಿಂತ ಒಂದು ತಿಂಗಳು ಮೊದಲೇ ಮಂಡನೆಯಾಗಲಿರುವ 2017-18ನೆ ಸಾಲಿನ ಕೇಂದ್ರ ಬಜೆಟ್ ಗೆ ಕ್ಷಣಗಣನೆ ಆರಂಭಗೊಂಡಿದ್ದು, ಬೆಳಗ್ಗೆ 11:00 ಗಂಟೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ರೈಲ್ವೆ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನವಾಗಿರುವುದು. ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಮಂಡನೆಯಾಗಲಿರುವುದು ಈ ಬಾರಿಯ ವಿಶೇಷ. . ಬಜೆಟ್ ಮಂಡನೆಗೆ ಸಿದ್ದತೆ ನಡೆದಿದ್ದು, ಬಜೆಟ್ ಪ್ರತಿಗಳು ಲೋಕಸಭೆಗೆ ತಲುಪಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಾಷ್ಟ್ರಪತಿ ಭವನಕ್ಕ ತೆರಳಿ ಬಜೆಟ್‌ನ ಸಾರಾಂಶವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ತಿಳಿಸಿದರು.
ಲೋಕಸಭೆಯ ಬಜೆಟ್ ಕಲಾಪ 11 ಗಂಟೆಗೆ ಆರಂಭವಾಗಲಿದೆ. ಕೇರಳದ ಸಂಸದ, ಐಯುಎಂಎಲ್ ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ವಿದೇಶಾಂಗ ಸಚಿವ ಇ. ಅಹ್ಮದ್ ಹೃದಯಾಘಾತದಿಂದ ಇಂದು ಬೆಳಗ್ಗೆ ದಿಲ್ಲಿಯ ರಾಮ್ ಮನೋಹರ‍್ ಲೋಹಿಯಾ ಆಸ್ಪತ್ರೆಯಲ್ಲಿ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.
ಈ ನಡುವೆ ಬಜೆಟ್ ಮಂಡನೆಯನ್ನು ನಾಳೆಗೆ ಮುಂದೂಡಬೇಕೆಂದು ಶಿವಸೇನೆ,ಕೇರಳದ ಸಂಸದರು ಒತ್ತಾಯಿಸಿದ್ದಾರೆ.ಈ ಕಾರಣದಿಂದಾಗಿ ಬಜೆಟ್ ಇಂದು ಮಂಡನೆಯಾಗುತ್ತದೋ ಅಥವಾ ನಾಳೆಗೆ ಮುಂದೂಡಲ್ಪಡುತ್ತದೋ ಎನ್ನುವುದು ಕುತೂಹಲ ಕೆರಳಿಸಿದೆ.







