ತಲಪ್ಪಾಡಿ: ಅವೈಜ್ಞಾನಿಕ,ತರಾತುರಿಯಲ್ಲಿ ಟೋಲ್ ಸಂಗ್ರಹಣೆ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಧರಣಿ

ತಲಪ್ಪಾಡಿ, ಫೆ.1: ಎನ್.ಎಚ್ 66 ತಲಪ್ಪಾಡಿ ಟೋಲ್ ಗೇಟ್ ನಲ್ಲಿ ಅವೈಜ್ಞಾನಿಕವಾಗಿ ಹಾಗೂ ತರಾತುರಿಯಲ್ಲಿ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಸದಸ್ಯರು ಬುಧವಾರ ಟೋಲ್ ಬಂದ್ ಮಾಡಿ ಧರಣಿ ನಡೆಸಿತು.
ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಹಾಗೂ ರಸ್ತೆಯನ್ನು ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುತ್ತಿರುವುದು ವಿಪರ್ಯಾಸ. ತೊಕ್ಕೊಟು ಹಾಗೂ ಮಂಗಳೂರಿನ ಪಂಪ್ ವೆಲ್ ಬಳಿ ಮೇಲ್ಸೇತುವೆ ಕಾಮಗಾರಿ, ಸರ್ವಿಸ್ ರಸ್ತೆಗಳು ಇನ್ನೂ ಪೂರ್ಣಗೊಳ್ಳದೆ ಟೋಲ್ ಸಂಗ್ರಹಿಸುತ್ತಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಿಕ್ಷಾಗಳಿಗೆ ಹಾಗೂ ಸ್ಥಳೀಯ ರಿಜಿಸ್ಟ್ರೇಶನ್(ಕೆಎ.19) ಹೊಂದಿರುವ ವಾಹನಗಳಿಗೆ ಟೋಲ್ ಶುಲ್ಕ ರದ್ದುಗೊಳಿಸಬೇಕು. ಅಲ್ಲದೆ ಟೋಲ್ ಬೂತ್ ಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಂಬಂಧಟ್ಟ ಸಚಿವರುಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಕಾಂಗ್ರೆಸ್ ಜಯರಾಮ ಶೆಟ್ಟಿ, ವೈಭವ್, ಉಮೇಶ್ ಗಾಂಭೀರ್, ಸಲಾಂ, ಮುಹಮ್ಮದ್ ಬಶೀರ್ ಮತ್ತಿತರರು ಭಾಗವಹಿಸಿದರು.







