ಮಸೀದಿಗೆ ಕಲ್ಲು, ರಿಕ್ಷಾ ಚಾಲಕನ ಕೊಲೆ: ಎರಡೂ ಕೃತ್ಯ ಎಸಗಿರುವ ಹಿಂಜಾವೇ ಕಾರ್ಯಕರ್ತನ ಬಂಧನ

ಉಡುಪಿ, ಫೆ.1: ಆದಿ ಉಡುಪಿಯ ನೂರುಲ್ ಇಸ್ಲಾಮ್ ಮಸೀದಿ ಹಾಗೂ ಕರವಾಳಿ ಬೈಪಾಸ್ ಬಳಿ ರಿಕ್ಷಾ ಚಾಲಕ ಹನೀಫ್ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮಂಗಳೂರು ಕುಂಪಲ ನಿವಾಸಿ, ಹಿಂದು ಜಾಗರಣಾ ವೇದಿಕೆಯ ಕಾರ್ಯಕರ್ತ ಅಂಖಿತ್ ಪೂಜಾರಿ ಎಂದು ಗುರುತಿಸಲಾಗಿದೆ. ಸಂಘಪರಿವಾರದ ಸಕ್ರೀಯ ಕಾರ್ಯಕರ್ತನಾಗಿರುವ ಈತನ ವಿರುದ್ಧ ಮಂಗಳೂರು, ವಿಟ್ಲ ಸೇರಿದಂತೆ ಹಲವು ಕಡೆ ಕೊಲೆಯತ್ನ, ಕೋಮು ಅಪರಾಧ ಗಳು ದಾಖಲಾಗಿವೆ. ಮೊದಲು ಜ.28ರಂದು ರಾತ್ರಿ 12.14ರ ಸುಮಾರಿಗೆ ಮಸೀದಿಗೆ ಕಲ್ಲೆಸೆದು ಬೈಕಿನಲ್ಲಿ ಪರಾರಿಯಾಗುತ್ತಿದ್ದ ಈತ ಕರವಾಳಿ ಬೈಪಾಸ್ ಬಳಿ ರಾಂಗ್ ಸೈಡ್ ವಿಚಾರದಲ್ಲಿ ರಿಕ್ಷಾ ಚಾಲಕ ಹನೀಫ್ ಎಂಬವರೊಂದಿಗೆ ಜಗಳಕ್ಕೆ ಇಳಿದನು. ರಿಕ್ಷಾದ ಎದುರಿನಲ್ಲಿ ‘ತೌಫಿಕ್’ ಎಂಬುದಾಗಿ ಬರೆದಿರುವುದರಿಂದ ಹಾಗೂ ಅಲ್ಲಿಗೆ ಬಂದ ಹನೀಫ್‌ರ ಭಾಮೈದ ಶಬ್ಬೀರ್‌ಗೆ ಹಾಗೂ ಚಾಲಕ ಹನೀಫ್ ಗೆ ಚೂರಿಯಿಂದ ಇರಿದು ಪರಾರಿಯಾದನು. ಇದರಿಂದ ಗಂಭೀರವಾಗಿ ಗಾಯಗೊಂಡ ಹನೀಫ್ ನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಆರೋಪಿ ಮಸೀದಿಗೆ ಕಲ್ಲೆಸೆಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವುದರಿಂದ ಆ ಚಿತ್ರವನ್ನು ಚೂರಿ ಇರಿತದಿಂದ ಗಾಯಗೊಂಡಿರುವ ಶಬ್ಬೀರ್‌ಗೆ ತೋರಿಸಿದ ಪೊಲೀಸರು ಎರಡು ಕೃತ್ಯ ಎಸಗಿರುವವ ಒಬ್ಬನೆ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಂಡರು. ಮುಂದೆ ಅದೇ ದಿಕ್ಕಿನಲ್ಲಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇನ್ನು ತನಿಖೆಯ ಪೂರ್ಣ ವಿವರ ದೊರೆಯಬೇಕಾಗಿದೆ.





