ತನ್ನ 6ನೇ ಪುತ್ರಿಯ ವಿವಾಹದಂದೇ 6 ಬಡ ಹೆಣ್ಣು ಮಕ್ಕಳ ಮದುವೆಯನ್ನೂ ನೆರವೇರಿಸಲಿರುವ ಸುಳ್ಯದ ಮೀನು ವ್ಯಾಪಾರಿ

ಮಂಗಳೂರು, ಫೆ.1: ತಮ್ಮಪುತ್ರ ಪುತ್ರಿಯರ ವಿವಾಹಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸುವ ಶ್ರೀಮಂತರಿಗೆ ಪಾಠವಾಗಬಲ್ಲಂತಹ ಹೆಜ್ಜೆಯನ್ನಿಡಲು ಸುಳ್ಯದ ಅನಕ್ಷರಸ್ಥ ಮೀನು ಮಾರಾಟಗಾರರೊಬ್ಬರು ಮುಂದಾಗಿದ್ದಾರೆ. ತಮ್ಮ ಆರನೆ ಪುತ್ರಿಯ ವಿವಾಹದ ದಿನದಂದು ಆರು ಮಂದಿ ಬಡ ಕುಟುಂಬದ ಹಾಗೂ ಅನಾಥ ಹೆಣ್ಣು ಮಕ್ಕಳನ್ನೂ ಅವರು ವಿವಾಹ ಮಾಡಿ ಕೊಡಲಿದ್ದಾರೆ.
ಸುಳ್ಯದ ಗುಂಡ್ಯಡ್ಕ ಹಳೆಗೇಟು ನಿವಾಸಿಯಾಗಿರುವ 56 ವರ್ಷದ ಇಬ್ರಾಹಿಂ ಅವರಿಗೆ ಬಡಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ ಮಾಡಬೇಕೆಂಬುದು ಬಹು ದಿನಗಳ ಕನಸು. ಅವರಿಗೆ ಒಟ್ಟು ಏಳು ಮಂದಿ ಪುತ್ರಿಯರು ಹಾಗೂ ಮೂವರು ಪುತ್ರರು. ತಮ್ಮ ಐದು ಮಂದಿ ಹೆಣ್ಣುಮಕ್ಕಳನ್ನು ಕಷ್ಟಪಟ್ಟು ವಿವಾಹ ಮಾಡಿ ಇದೀಗ ಫೆಬ್ರವರಿ 5ರಂದು ತಮ್ಮ ಆರನೇ ಪುತ್ರಿಯ ವಿವಾಹವ ದಿನದಂದೇ ಇತರ ಆರು ಮಂದಿ ಬಡ ಹೆಣ್ಣುಮಕ್ಕಳ ವಿವಾಹವನ್ನೂ ನಡೆಸಿಕೊಡಲಿದ್ದಾರೆ. ಆರು ಮಂದಿ ಅರ್ಹ ಹೆಣ್ಣು ಮಕ್ಕಳನ್ನು ಹುಡುಕುವ ಸಲುವಾಗಿ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನಾದ್ಯಂತ ಅವರು ಹುಡುಕಿ ಇಬ್ಬರು ಮದುವೆಯ ವಯಸ್ಸಿಗೆ ಬಂದ ಅನಾಥ ಹೆಣ್ಣುಮಕ್ಕಳು ಹಾಗೂ ನಾಲ್ಕು ಮಂದಿ ಬಡ ಕುಟುಂಬಕ್ಕೆ ಸೇರಿದ ಹೆಣ್ಣುವಕ್ಕಳನ್ನುಆರಿಸಿದ್ದಾರೆ. ವಿವಾಹದ ದಿನದಂದು ತಮ್ಮ ಮಗಳಿಗೆ ನೀಡಿದಂತೆ ಅವರಿಗೂ ಬಟ್ಟೆಬರೆ ಒಡವೆಗಳನ್ನು ನೀಡಲಿದ್ದಾರಲ್ಲದೆ ಅವರ ಕುಟುಂಬಗಳಿಗೂ ಆದರಾತಿಥ್ಯ ನೀಡಲಿದ್ದಾರೆ.
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದೇನೆಂದು ಬಡತನವೇನೆಂದು ಹತ್ತಿರದಿಂದ ಕಂಡ ಇಬ್ರಾಹಿಂ ಹೇಳುತ್ತಾರೆ. ‘‘ನನ್ನನ್ನು ಬೆಳೆಸಲು ನನ್ನ ತಾಯಿ ಗದ್ದೆಗಳಲ್ಲಿ ದುಡಿಯುತ್ತಿದ್ದರು. ಶಾಲೆಗೆ ಹೋಗಲೂ ನಮ್ಮಲ್ಲಿ ಹಣವಿರಲಿಲ್ಲ,’’ ಎಂದು ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾರೆ.
ಯುವಕರಾಗಿದ್ದಾಗ ಕೆಲಸ ಅರಸಿಕೊಂಡು ಗಲ್ಫ್ ರಾಷ್ಟ್ರಕ್ಕೆ ಹೋಗಿದ್ದ ಇಬ್ರಾಹಿಂ ಅಲ್ಲಿ ಎರಡು ವರ್ಷ ಕೆಲಸ ಮಾಡಿ ಮತ್ತೆ ಸುಳ್ಯಕ್ಕೆ ಹಿಂದಿರುಗಿ ಟೆಂಪೊದಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ. ಅವರು ಸುಳ್ಯ ತಾಲೂಕಲ್ಲದೆ, ಪುತ್ತೂರು, ಮಡಿಕೇರಿಗೂ ಮೀನು ಸರಬರಾಜು ಮಾಡುತ್ತಾರೆ.







