ಆಲಡ್ಕದಲ್ಲಿ ದೆಂಜಿಪ್ಪಾಡಿ ವೃದ್ಧರ ಪುನರ್ವಸತಿ ಕೇಂದ್ರ ಉದ್ಘಾಟನೆ

ಬಂಟ್ವಾಳ, ಫೆ.1: ಮುಸ್ಲಿಂ ಸಮುದಾಯದ ನಿರ್ಗತಿಕರ ಪಾಲನೆಗಾಗಿ ದ.ಕ ಹಾಗೂ ಉಡುಪಿ ಜಿಲ್ಲಾ ನಿವೃತ್ತ ಮುಸ್ಲಿಂ ಅಧಿಕಾರಿಗಳ ಸಂಘದ ವತಿಯಿಂದ ನೂತನ ದೆಂಜಿಪ್ಪಾಡಿ ಪುನರ್ವಸತಿ ಕೇಂದ್ರವನ್ನು ದ.ಕ. ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಬಿ.ರಮಾನಾಥ ರೈಯವರು ಇತ್ತೀಚೆಗೆ ಆಲಡ್ಕದಲ್ಲಿ ಉದ್ಘಾಟಿಸಿದರು.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರವರು ದುವಾ ಆಶೀರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝಾಹಿದ್ ಹುಸೈನ್ ಬಾಜಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎ.ಎಚ್.ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯದ ವೃದ್ಧರ ಪಾಲನೆಗಾಗಿ ಮಹತ್ವಾಕಾಂಕ್ಷಿ ಪುನರ್ವಸತಿ ಕೇಂದ್ರದ ರೂಪುರೇಷೆಗಳನ್ನು ತಿಳಿಸಿದರು. ಸಂಘದ ಸ್ಥಾಪನೆಗೆ ಪ್ರೇರಣೆ ನೀಡಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಹಾಗೂ ಸ್ಥಾಪಕಾಧ್ಯಕ್ಷ ಹಾಜಿ ಬಿ.ಎಸ್.ಹುಸೈನ್‌ರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ, ಹೆತ್ತವರ ರಕ್ಷಣೆ ಮಕ್ಕಳ ಕರ್ತವ್ಯವಾಗಿದ್ದು ನಾವು ನಮ್ಮ ಹೆತ್ತವರನ್ನು ನೋಡಿಕೊಂಡಂತೆ, ನಮ್ಮ ಮಕ್ಕಳು ಅನುಸರಿಸುತ್ತಾರೆಂದು ನೈಜ ಉದಾಹರಣೆಯೊಂದಿಗೆ ಮಾರ್ಮಿಕವಾಗಿ ತಿಳಿಸಿದರು. ಎಲ್ಲರ ಮರಣವು ಶಾಂತಿಯೊಂದಿಗೆ ಆಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಸ್ಥಾಪಕಾಧ್ಯಕ್ಷ ಹಾಜಿ ಬಿ.ಎಸ್.ಹುಸೈನ್, ರಫೀಕ್ ಮಾಸ್ಟರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿದರು.
ಪುನರ್ವಸತಿ ಕೇಂದ್ರ ಕಟ್ಟಡ ಹಾಗೂ 20 ಸೆಂಟ್ಸ್ ಸ್ಥಳವನ್ನು ವಕ್ಫ್ ಮಾಡಿಕೊಟ್ಟ ದಾನಿ ಹಾಜಿ ಅಬ್ದುಲ್ ಖಾದರ್‌ರನ್ನು ಶಾಲು ಹೊದಿಸಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕದ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ಜಿಲ್ಲಾ ವಕ್ಫ್‌ನ ಮಾಜಿ ಅಧ್ಯಕ್ಷ ಹಾಜಿ ಉಸ್ಮಾನ್, ಹಾಜಿ ಸಿದ್ದೀಕ್ ಭಟ್ಕಳ, ತೌಫೀಕ್ ಇಂಡಸ್ಟ್ರೀಸ್‌ನ ರಫೀಕ್, ಹಾಜಿ ಪಿ.ಎಸ್.ಮೋನು ಹಾಜಿ, ಡಿ.ಎಂ.ಅಬ್ದುರ್ರಹ್ಮಾನ್ ಶೇಕ್, ಹಸನ್ ಸಾಹೇಬ್, ಟಿ. ಖಾಲಿದ್, ಕಾರ್ಯದರ್ಶಿ, ಅಬ್ದುಲ್ ರಶೀದ್, ಅಬ್ದುಲ್ ಮಜೀದ್, ಇಬ್ರಾಹೀಂ, ಎಪಿಎಂಸಿ ಕೋಶಾಧಿಕಾರಿ ಹಾಜಿ ಎಫ್.ಎ. ಖಾದರ್, ಉಪಾಧ್ಯಕ್ಷ ದೆಂಜಿಪ್ಪಾಡಿ ಅಬ್ದುಲ್ ಖಾದರ್, ಡಾ.ಎಂ.ಎಂ. ಶರೀಫ್, ಯಾಸಿನ್ ಬಾವ, ಪಿ.ಎಸ್ ಸಲ್ದಾನ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎ.ಎಚ್.ತುಂಬೆಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಎಸ್.ಎ.ರೆಹ್ಮಾನ್‌ರವರ ಕಿರಾಅತ್ ಪಠಿಸಿದರು.







