ಸೈಕಲ್ ಸವಾರ ಯುವಕನ ಮೇಲೆ ಹರಿಯಿತು ಸರಕಾರಿ ಬಸ್
ಕೊಪ್ಪಳದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ’

ಕೊಪ್ಪಳ, ಫೆ.1: ಸರಕಾರಿ ಬಸ್ಸೊಂದು ಸೈಕಲ್ ಗೆ ಡಿಕ್ಕಿ ಹೊಡೆದು ಸೈಕಲ್ ಸವಾರ ಗಂಭೀರ ಗಾಯಗೊಂಡರೂ, ಅಲ್ಲಿದ್ದ ಜನ ಬಾಲಕನ ನೆರವಿಗೆ ಬಾರದೆ ಆತನ ನರಕಯಾತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುವುದರಲ್ಲೇ ಬ್ಯುಸಿಯಾಗಿ ಅಮಾನವೀಯವಾಗಿ ವರ್ತಿಸಿದ ಘಟನೆ ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು ನಡೆದಿದೆ
ನಗರದ ದೇವರಾಜ್ ಅರಸ ಕಾಲೋನಿಯ ನಿವಾಸಿ ಅನ್ವರ್ ಅಲಿ (17) ಬಸ್ ಚಕ್ರದಡಿ ಸಿಲುಕಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ನರಳಿದ ಹದಿ ಹರೆಯದ ಬಡಪಾಯಿ ಯುವಕ ಎಂದು ತಿಳಿದು ಬಂದಿದೆ.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಯುವಕ ಅನ್ವರ್ ಅಲಿ ಸೈಕಲ್ ಗೆ ಸರಕಾರಿ ಬಸ್ ಡಿಕ್ಕಿ ಹೊಡೆದು , ಅವರ ದೇಹದ ಮಧ್ಯಭಾಗದಲ್ಲಿ ಬಸ್ ಹತ್ತಿ ಇಳಿದಿದ್ದು, ಪರಿಣಾಮವಾಗಿ ಅನ್ವರ್ ಅಲಿ ಗಂಭೀರ ಗಾಯಗೊಂಡರು. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದರು. ಆಗ ಅಲ್ಲಿದ್ದವರಿಗೆ ಕರುಣೆ ಅನ್ನೋದು ಬಾಯಿ ಮಾತಿಗೆ ಸೀಮಿತವಾಗಿತ್ತು ! ಯುವಕ ಕಾಪಾಡಿ.. ಕಾಪಾಡಿ ಎಂದು ಅಂಗಲಾಚಿದರೂ ಯುವಕನ ನೆರವಿಗೆ ಯಾರೂ ಬರಲಿಲ್ಲ. ಸರಕಾರದ ಸಾಂತ್ವನ ಯೋಜನೆಯ ಪ್ರಯೋಜನೆ ಯುವಕನಿಗೆ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿ ಯೊಬ್ಬರು ದೂರಿದ್ದಾರೆ.
ಸುಮಾರು ಹದಿನೈದು ನಿಮಿಷಗಳ ಕಾಲ ರಸ್ತೆಯಲ್ಲಿ ಒದ್ದಾಡಿದ ಯುವಕನನ್ನು ಬಳಿಕ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡ ಯುವಕ ಅನ್ವರ್ ಅಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ.





