ತುಂಬೆ ವೆಂಟೆಡ್ ಡ್ಯಾಮ್ ಸಂತ್ರಸ್ತರಿಗೆ ಪರಿಹಾರ ಸಿಗದಿದ್ದರೆ ಹೋರಾಟ: ರೈತ ಸಂಘ
ಮಂಗಳೂರು, ಫೆ.1: ತುಂಬೆ ವೆಂಟೆಡ್ ಡ್ಯಾಂನಿಂದಾಗಿ ಮುಳುಗಡೆಯಾದ ರೈತರ ಜಮೀನಿಗೆ ಸೂಕ್ತ ಪರಿಹಾರ ಇನ್ನೂ ಸಿಕ್ಕಿಲ್ಲ. ರೈತರಿಗೆ ನ್ಯಾಯ ಸಿಗದಿದ್ದಲ್ಲಿ ಕಂಬಳ ಮಾದರಿ ಹೋರಾಟದಂತೆ, ಸಾಕು ಪ್ರಾಣಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಎಚ್ಚರಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ ಶೆಟ್ಟಿ, ಪರಿಹಾರಕ್ಕಾಗಿ ಕಾನೂನು ಹೋರಾಟ ಮಾಡುತ್ತಾ ಬಂದಿದ್ದೇವೆ. ಜ. 16ರಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 8 ಮೀಟರ್ ಎತ್ತರಕ್ಕೆ ಮುಳುಗಡೆ ಜಮೀನಿನ ಮರು ಸರ್ವೆಯನ್ನು ರೈತರ ಸಮ್ಮುಖ ನಡೆಸಿ 1 ತಿಂಗಳೊಳಗೆ ಸೂಕ್ತ ಪರಿಹಾರ ನೀಡುವಂತೆ ಮನಪಾ ಮತ್ತು ದ.ಕ.ಜಿಲ್ಲಾಧಿಕಾರಿಗೆ ಆದೇಶಿಸಿದೆ. ಆದರೆ ಜಿಲ್ಲಾಡಳಿತ ರೈತರಿಗೆ ಮಾಹಿತಿ ನೀಡದೆ ಸರ್ವೆ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ರೈತರಿಗೆ ಪರಿಹಾರ ನೀಡಿದ ಬಳಿಕವೇ ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹಕ್ಕೆ ಮುಂದಾಗುವುದಾಗಿ ತಿಳಿಸಿದ್ದ ಜಿಲ್ಲಾಡಳಿತ ಈಗ ಪರಿಹಾರ ನೀಡದೆ 5 ಮೀಟರ್‌ವರೆಗೆ ನೀರು ಏರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೇವಲ 4.5 ಮೀ. ನೀರು ಏರಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಸಮಾಧಾನ ವ್ಯಕ್ತಪಡಿಸಿದರು.
2014ರಿಂದ ಮುಳುಗಡೆ ಜಮೀನಿಗೆ ನ್ಯಾಯೋಚಿತ ಸೂಕ್ತ ಪರಿಹಾರ ನೀಡುವಂತೆ ಬಂಟ್ವಾಳ ತಾಲೂಕಿನ 6 ಗ್ರಾಮಗಳ ರೈತರು ವರ್ಗ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. 2015ರಲ್ಲಿ ಮುನ್ಸಿಪ್ ಕೋರ್ಟ್ ಬಂಟ್ವಾಳ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರೈತರಿಗಾದ ಅನ್ಯಾಯದ ವಿರುದ್ಧ ದಾವೆ ಹೂಡಲಾಗಿತ್ತು. ಇದೀಗ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡು, ಫೆ.16ರೊಳಗೆ ಸೂಕ್ತ ನ್ಯಾಯ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಆದರೆ ಜ. 20ರಿಂದ ರೈತರಿಗೆ ಯಾವುದೇ ಸೂಚನೆ ನೀಡದೆ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಎನ್. ಕೆ. ಇದಿನಬ್ಬ, ಸುದೇಶ ಮಯ್ಯ ಉಪಸ್ಥಿತರಿದ್ದರು.







