ಅಂತಿಮ ಟ್ವೆಂಟಿ-20 ಪಂದ್ಯದಿಂದ ಹಿಂದೆ ಸರಿದ ಅಂಪೈರ್ ಶಂಸುದ್ದೀನ್

ಬೆಂಗಳೂರು,ಫೆ.1: ನಾಗ್ಪುರದಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿನಿಂದ ಇಂಗ್ಲೆಂಡ್ ಆಟಗಾರರಿಂದ ಟೀಕೆಗೆ ಗುರಿಯಾಗಿದ್ದ ಅಂಪೈರ್ ಸಿ. ಶಂಸುದ್ದೀನ್ ಬೆಂಗಳೂರಿನಲ್ಲಿ ಬುಧವಾರ ನಡೆದ ಭಾರತ-ಇಂಗ್ಲೆಂಡ್ ನಡುವಿನ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
3ನೆ ಟ್ವೆಂಟಿ-20 ಪಂದ್ಯದಲ್ಲಿ ಶಂಸುದ್ದೀನ್ ಮೂರನೆ ಅಂಪೈರ್ ಆಗಿ ಕಾರ್ಯನಿರ್ವಹಿಸಬೇಕಾಗಿತ್ತು. ಶಂಸುದ್ದೀನ್ ಬದಲಿಗೆ ನಿತಿನ್ ಮೆನನ್ ಮೂರನೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಶಂಸುದ್ದೀನ್ ಅಂಪೈರ್ ಆಗಿ ಕಾರ್ಯನಿರ್ವಹಿಸಲು 100 ಶೇ.ರಷ್ಟು ಫಿಟ್ ಆಗಿಲ್ಲದ ಕಾರಣ 3ನೆ ಪಂದ್ಯದಿಂದ ಸ್ವತಹ ಹಿಂದೆ ಸರಿದಿದ್ದಾರೆ. ನಾಗ್ಪುರದಲ್ಲಿ ನಡೆದ ಎರಡನೆ ಟ್ವೆಂಟಿ-20ಯಲ್ಲಿ ಇಂಗ್ಲೆಂಡ್ ತಂಡ ರನ್ ಚೇಸಿಂಗ್‌ನಲ್ಲಿ ತೊಡಗಿದ್ದಾಗ ಅಂತಿಮ ಓವರ್‌ನಲ್ಲಿ ಅಂಪೈರ್ ಶಂಸುದ್ದೀನ್ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ರೂಟ್ ವಿರುದ್ಧ ಎಲ್ಬಿಡಬ್ಲು ತೀರ್ಪು ನೀಡಿದ್ದರು. 5 ರನ್‌ನಿಂದ ಪಂದ್ಯ ಸೋತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಅಂಪೈರ್ ಶಂಸುದ್ದೀನ್ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂಪೈರ್ ನೀಡಿರುವ ತಪ್ಪು ತೀರ್ಪಿನ ಬಗ್ಗೆ ಮ್ಯಾಚ್ ರೆಫರಿ ಗಮನಕ್ಕೆ ತರುವೆ ಎಂದು ಮೊರ್ಗನ್ ಹೇಳಿದ್ದರು. ಇಂಗ್ಲೆಂಡ್ ಟೀಮ್ ಮ್ಯಾನೇಜ್‌ಮೆಂಟ್ ಕೂಡ ಅಂಪೈರ್ ಸಂಶುದ್ದೀನ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು.
ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ-ಪಾಕಿಸ್ತಾನ ನಡುವಿನ ಐದನೆ ಏಕದಿನ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಶಂಸುದ್ದೀನ್ ಒಂದು ದಿನದ ಬಳಿಕ ಭಾರತ-ಇಂಗ್ಲೆಂಡ್‌ನ 2ನೆ ಟ್ವೆಂಟಿ-20ಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಟ್ವೆಂಟಿ-20ಯಲ್ಲಿ ಅಂಪೈರ್‌ಗಳನ್ನು ಆತಿಥೇಯ ಕ್ರಿಕೆಟ್ ಮಂಡಳಿ ನೇಮಕ ಮಾಡುತ್ತದೆ. ಶಂಸುದ್ದೀನ್‌ರನ್ನು ಬಿಸಿಸಿಐ ನೇಮಕ ಮಾಡಿತ್ತು.
2ನೆ ಪಂದ್ಯದಲ್ಲಿ ತಪ್ಪು ತೀರ್ಪು ನೀಡಿ ವಿವಾದಕ್ಕೆ ಸಿಲುಕಿದ್ದ ಶಂಸುದ್ದೀನ್ ವಿರುದ್ದ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಆದರೆ, ಅವರು ಬುಧವಾರದ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು.







