ಜಾನುವಾರ ಸಾಗಾಟಗಾರರ ಮೇಲೆ ಸಂಘ ಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಆರೋಪ
ಪಿಕಪ್ ಸಹಿತ ಇಬ್ಬರು ಪೊಲೀಸ್ ವಶಕ್ಕೆ
ಬಂಟ್ವಾಳ , ಫೆ.1 : ಬಾಳ್ತಿಲ ಗ್ರಾಮದ ನೀರಪಾದೆಯ ಕಾಂದಿಲ ಎಂಬಲ್ಲಿ ಪಿಕಪ್ ನಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಸಂಘಪರಿವಾರದ ಕಾರ್ಯಕರ್ತರು ಪತ್ತೆ ಹಚ್ಚಿ ಚಾಲಕ ಮತ್ತು ಕ್ಲೀನರ್ ಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದವರನ್ನು ಚಾಲಕ ಅಡ್ಯಾರ್ ನ ಸಾದಿಕ್ ಹಾಗೂ ಕ್ಲೀನರ್ ಸಂಜಯ ಡಿಸೋಜ ಎಂದು ಗುರುತಿಸಲಾಗಿದೆ.
ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ಆರೋಪಿಗಳು ಪಿಕಪ್ ನ್ನು ತಡೆಗಟ್ಟಿ , ಚಾಲಕ ಮತ್ತು ಕ್ಲೀನರ್ ಗೆ ಥಳಿಸಿ ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಎಂದು ತಿಳಿದು ಬಂದಿದೆ .
ಈ ಸಂದರ್ಭ ಕೆಲ ಹೊತ್ತು ಆತಂಕದ ವಾತಾವರಣವು ಉಂಟಾಗಿತ್ತೆನ್ನಲಾಗಿದೆ.
ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಹಾಗೂ ಜಾನುವಾರು ಸಹಿತ ಪಿಕಪ್ ವಶಕ್ಕೆ ತೆಗೆದುಕೊಂಡಿದ್ದಾರೆ .
ಜಾನುವಾರನ್ನು ನೀರಪಾದೆಯಿಂದ ನೀರುಮಾರ್ಗಕ್ಕೆ ಸಾಗಿಸಲಾಗುತ್ತಿತ್ತೆನ್ನಲಾಗಿದೆ.
ಅಕ್ರಮ ಜಾನುವಾರು ಸಾಗಾಟ ಎಂಬ ಆರೋಪದಡಿಯಲ್ಲಿ ಹಲ್ಲೆಗೊಳಗಾದ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಹಾಗೂ ಹಲ್ಲೆ ನಡೆಸಿದ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







