ಕೇಂದ್ರದ ಬಜೆಟ್ ಬಗ್ಗೆ ಯು.ಟಿ. ಖಾದರ್ , ರಮಾನಾಥ ರೈ ಹೇಳಿದ್ದೇನು ?

ಮಂಗಳೂರು, ಫೆ.1: ಇಂದು ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಯಾವುದೇ ದೂರದರ್ಶಿತ್ವ ಇಲ್ಲದ ನಿರಾಶಾದಾಯಕ ಬಜೆಟ್ ಎಂದು ಆಹಾರ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.
ನೋಟು ನಿಷೇಧದ ನಂತರ ದೇಶದ ಬ್ಯಾಂಕುಗಳಲ್ಲಿ ಎಷ್ಟು ಹಣ ಠೇವಣಿಯಾಗಿದೆ ಎಂಬ ಮಾಹಿತಿಯನ್ನು ಬಜೆಟ್ ನಲ್ಲಿ ಬಹಿರಂಗ ಪಡಿಸಿಲ್ಲ. ಬಜೆಟ್ ಎಂಬುದು ದೇಶದ ಆರ್ಥಿಕ ಮೂಲ ಮತ್ತು ಪರಿಸ್ಥಿತಿ ತಿಳಿಸುವ ಮಾಹಿತಿ. ಆದರೆ ಹಣದ ಮೂಲಗಳನ್ನು ಸ್ಪಷ್ಟಪಡಿಸಿಲ್ಲ. ಜನಸಾಮಾನ್ಯರ ಉಳಿತಾಯವನ್ನು ಕಪ್ಪುಹಣ ಎಂದು ಹೇಳಿ ಕೇಂದ್ರ ಹೆಮ್ಮೆಪಡುತ್ತಿದೆ. ನೋಟು ನಿಷೇಧದ ಹಿಂದಿನ ಮೂರು ತಿಂಗಳಲ್ಲಿ ದೇಶದಲ್ಲಿ 2.5. ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದ್ದರೆ, ನೋಟು ನಿಷೇಧ ನಂತರದ 3 ತಿಂಗಳಲ್ಲಿ ಇದು 1.5 ಲಕ್ಷ ಕೋಟಿಗೆ ತಗ್ಗಿದೆ. ಇದರಿಂದ ದೇಶದಲ್ಲಿ ಉದ್ಯೋಗಾವಕಾಶಗಳು ತಗ್ಗುತ್ತಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಬಿ. ರಮಾನಾಥ ರೈ :
ಇಂದು ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಯ ಅಡಿಕೆ ಮತ್ತು ರಬ್ಬರ್ ಬೆಳೆಗಾರರಿಗೆ ಯಾವುದೇ ನೆರವು ಘೋಷಿಸಿಲ್ಲ ಎಂದು ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೋಟು ನಿಷೇಧದಿಂದಾಗಿ ಅತಿ ದೊಡ್ಡ ಉದ್ಯೋಗ ಕ್ಷೇತ್ರವಾದ ಸಣ್ಣ ಕೈಗಾರಿಕೆಯಲ್ಲಿ ಶೇಕಡಾ 85ರಷ್ಟು ಉದ್ಯೋಗ ನಷ್ಟವಾಗಿದೆ. ಇದನ್ನು ಸರಿದೂಗಿಸಲು ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜಿಸುವ ಯಾವುದೇ ಯೋಜನೆಗಳು ಬಜೆಟ್‌ನಲ್ಲಿ ಇಲ್ಲ. ಕುಸಿಯುತ್ತಿರುವ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಿಲ್ಲ. ಇದರಿಂದ ಕೆಳಹಂತದ ಆರ್ಥಿಕ ವ್ಯವಸ್ಥೆಯ ಮೇಲೆ ಕರಾಳ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಚಿವ ರೈ ಆತಂಕ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಬಜೆಟನ್ನೂ ಇದೇ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಮಂಗಳೂರಿಗೆ ಆರ್ಥಿಕ ಶಕ್ತಿಯನ್ನು ವೃದ್ಧಿಸಲು ಆರ್ಥಿಕ ಆಧಾರಿತ ರೈಲ್ವೇ ಯೋಜನೆಗಳ ಅಗತ್ಯವಿತ್ತು.ಆದರೆ ಕರಾವಳಿಯ ಜನತೆಯ ದೀರ್ಘಕಾಲದ ರೈಲ್ವೆ ಬೇಡಿಕೆಗಳನ್ನು ಕಡೆಗೆಣಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳ ವೇಗ ತಗ್ಗುವ ಸಾಧ್ಯತೆ ಇದೆ. ಪ್ರಯಾಣಿಕರ ಸೌಲಭ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಸಚಿವ ರಮಾನಾಥ ರೈ ಅವರು ತಿಳಿಸಿದ್ದಾರೆ.
ಇಬ್ರಾಹೀಂ ಕೋಡಿಜಾಲ್ :
ಕೇಂದ್ರ ಸರಕಾರ ಪಂಚ ರಾಜ್ಯಗಳ ಚುನಾವಣಾ ದೃಷ್ಟಿಕೋನ ಇಟ್ಟುಕೊಂಡು ಈ ಬಜೆಟ್ ಮಂಡಿಸಿದೆ. ರೈತರ ಸಾಲ ಮನ್ನಾ ಮಾಡಬಹುದು ಎಂದು ಬಹುಜನರು ನಿರೀಕ್ಷ್ಷೆ ಮಾಡಿದ್ದರು. ಆದರೆ ಆ ನಿರೀಕ್ಷೆಯನ್ನು ಹುಸಿಗೊಳಿಸಲಾಗಿದೆ. ಜನಸಾಮಾನ್ಯರು ನಿತ್ಯ ಬಳಕೆ ಮಾಡುವ ಮೊಬೈಲ್, ಚಪ್ಪಲಿ ಇತ್ಯಾದಿಗಳಿಗೆ ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಪ್ರತಿಕ್ರಿಯಿಸಿದ್ದಾರೆ .







