ರೈಲ್ವೆ ಬಜೆಟ್: ಮುಖ್ಯಾಂಶಗಳು

ಹೊಸದಿಲ್ಲಿ, ಫೆ. 1: ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ರೈಲು ಭದ್ರತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 92 ವರ್ಷಗಳಲ್ಲಿ ಮೊದಲ ಬಾರಿಗೆ ಈ ಬಾರಿ ರೈಲ್ವೆಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗಿಲ್ಲ.
2017-18ರ ರೈಲೆ ಬಜೆಟ್‌ನ ಮುಖ್ಯಾಂಶಗಳು:
1. ಐಆರ್‌ಸಿಟಿ ಮೂಲಕ ಖರೀದಿಸುವ ಇ-ಟಕೆಟ್‌ಗಳಿಗೆ ಸೇವಾ ಶುಲ್ಕ ಮನ್ನಾ
2. ಲಿಫ್ಟ್, ಎಸ್ಕಲೇಟರ್‌ಗಳನ್ನು ಒದಗಿಸುವ ಮೂಲಕ ದೇಶದ 500 ರೈಲು ನಿಲ್ದಾಣಗಳನ್ನು ಬಿನ್ನಚೇತನ ಸ್ನೇಹಿಯನ್ನಾಗಿ ಮಾಡಲಾಗುವುದು.
3. 2019ರ ವೇಳೆಗೆ ಎಲ್ಲ ಕೋಚ್‌ಗಳಲ್ಲಿ ಜೈವಿಕ ಶೌಚಾಲಯಗಳು
4. ಐದು ವರ್ಷಗಳ ಅವಧಿಯಲ್ಲಿ 1,00,000 ಕೋಟಿ ರೂ. ಬಂಡವಾಳದ ರೈಲು ಸುರಕ್ಷತಾ ನಿಧಿ ಸ್ಥಾಪನೆ
5. ಎಸ್‌ಎಮ್‌ಎಸ್ ಆಧಾರಿತ ‘ಕ್ಲೀನ್ ಮೈ ಕೋಚ್’ ಸೇವೆಗೆ ಚಾಲನೆ
6. 2017-18ರಲ್ಲಿ 3,500 ಕಿ.ಮೀ. ಉದ್ದದ ರೈಲು ಹಳಿಗಳ ನಿರ್ಮಾಣ
7. 25 ನಿಲ್ದಾಣಗಳ ನವೀಕರಣ
8. 2020ರ ವೇಳೆಗೆ ಮಾನವರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳ ನಿವಾರಣೆ
9. ವೆಚ್ಚ, ಸಾಮಾಜಿಕ ಬದ್ಧತೆ ಮತ್ತು ಸ್ಪರ್ಧೆಗಳ ಆಧಾರದಲ್ಲಿ ದರ ನಿಗದಿ
10. ನೂತನ ಮೆಟ್ರೊ ರೈಲು ನೀತಿಯೊಂದನ್ನು ಘೋಷಿಸಲಾಗುವುದು. ಇದು ಯುವಕರಿಗೆ ನೂತನ ಉದ್ಯೋಗಾವಕಾಶಗಳನ್ನು ಒದಗಿಸುವುದು.
ರೈಲ್ವೆ ಬಜೆಟ್: ಸುರಕ್ಷತೆಗೆ ಒತ್ತು
ಹೊಸದಿಲ್ಲಿ,ಫೆ.1: ಇದೇ ಮೊದಲ ಬಾರಿಗೆ ಸಾಮಾನ್ಯ ಬಜೆಟ್‌ನಲ್ಲಿ ವಿಲೀನ ಗೊಂಡಿರುವ ರೈಲ್ವೆ ಬಜೆಟ್ ರೈಲು ಪ್ರಯಾಣದ ಸುರಕ್ಷತೆ ಹೆಚ್ಚಳ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ, ಶೇರು ವಿನಿಮಯ ಕೇಂದ್ರಗಳಲ್ಲಿ ರೈಲ್ವೆ ಪಿಎಸ್‌ಯುಗಳ ಲಿಸ್ಟಿಂಗ್ ಮತ್ತು ಇತರ ಸಾರಿಗೆ ವಿಧಾನಗಳಿಗೆ ಪೈಪೋಟಿ ನೀಡಬಲ್ಲ ಪ್ರಯಾಣದರಗಳ ನಿಗದಿ ಇವುಗಳಿಗೆ ಹೆಚ್ಚಿನ ಒತ್ತು ನೀಡಿದೆ.ಮುಂದಿನ ಐದು ವರ್ಷಗಳಲ್ಲಿ 'ರೇಲ್ ಸಂರಕ್ಷಾ ಕೋಶ್' ಹೆಸರಿನಲ್ಲಿ ಒಂದು ಲಕ್ಷ ಕೋ.ರೂ.ಗಳ ರೈಲು ಸುರಕ್ಷತಾ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಸಂಸತ್ತಿನಲ್ಲಿ ತನ್ನ ಮುಂಗಡಪತ್ರ ಭಾಷಣದಲ್ಲಿ ತಿಳಿಸಿದರು.
2020ರ ವೇಳೆಗೆ ಬ್ರಾಡ್‌ಗೇಜ್ ಮಾರ್ಗಗಳಲ್ಲಿಯ ಎಲ್ಲ ಕಾವಲು ರಹಿತ ಕ್ರಾಸಿಂಗ್‌ಗಳನ್ನು ನಿವಾರಿಸಲಾಗುವುದು ಎಂದರು.ಐಆರ್‌ಸಿಟಿಸಿ ಮೂಲಕ ಬುಕ್ ಮಾಡುವ ಇ-ಟಿಕೆಟ್‌ಗಳ ಮೇಲಿನ ಸೇವಾ ಶುಲ್ಕವನ್ನು ರದ್ದುಗೊಳಿಸುವುದಾಗಿ ಅವರು ಪ್ರಕಟಿಸಿದರು. ಈ ಮುನ್ನ ಐಅರ್‌ಸಿಟಿಸಿ ಸ್ಲೀಪರ್ ಕ್ಲಾಸ್‌ಗೆ 20 ರೂ.ಮತ್ತು ಎಸಿ ಕ್ಲಾಸ್‌ಗೆ 40 ರೂ.ಸೇವಾ ಶುಲ್ಕ ವಿಧಿಸುತ್ತಿತ್ತು.ಸೇವಾ ಶುಲ್ಕ ರದ್ದತಿಯಿಂದಾಗಿ ಭಾರತೀಯ ರೈಲ್ವೆಯ ದೈನಂದಿನ ಆದಾಯದಲ್ಲಿ ಎರಡು ಲಕ್ಷ ರೂ.ಗಳ ಕೊರತೆಯುಂಟಾಗುತ್ತದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದರು. ಆದರೆ ಜೇಟ್ಲಿಯವರು ಪ್ರಕಟಿಸಿರುವ ಶೇರು ವಿನಿಮಯ ಕೇಂದ್ರಗಳಲ್ಲಿ ರೈಲ್ವೆ ಪಿಎಸ್‌ಯುಗಳ ಲಿಸ್ಟಿಂಗ್ ಯೋಜನೆಯಿಂದಾಗಿ ಹಣವನ್ನೆತ್ತಲು ಐಆರ್‌ಸಿಟಿಸಿಗೆ ಸಾಧ್ಯವಾಗಲಿದೆ.
ಐಆರ್‌ಸಿಟಿಸಿ ಜೊತೆಗೆ ಭಾರತೀಯ ರೈಲ್ವೆ ಹಣಕಾಸು ನಿಗಮ ಮತ್ತು ಇರ್ಕಾನ್ ಕೂಡ ಶೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಲಿವೆ. ವೆಚ್ಚಗಳು ಮತ್ತು ಸೇವೆಯ ಗುಣಮಟ್ಟ ಹಾಗೂ ಮತ್ತು ಇತರ ಸಾರಿಗೆ ವಿಧಾನಗಳಿಂದ ಸ್ಪರ್ಧೆಯನ್ನು ಪರಿಗಣಿಸಿ ರೈಲ್ವೆ ಪ್ರಯಾಣ ದರಗಳನ್ನು ನಿಗದಿಗೊಳಿಸಲಾಗುವುದು ಎಂದು ಜೇಟ್ಲಿ ತಿಳಿಸಿದರು.2016-17ರಲ್ಲಿ ಭಾರತೀಯ ರೈಲ್ವೆಯ ಯೋಜನಾ ಗಾತ್ರ 1.21 ಲ.ಕೋ.ರೂ.ಗಳದ್ದಾಗಿದ್ದರೆ, 2017-18ನೇ ಸಾಲಿಗೆ 1.31 ಲ.ಕೋ.ರೂ.ಗಳ ದಾಖಲೆ ಯೋಜನಾ ಗಾತ್ರವನ್ನು ಪ್ರಕಟಿಸಲಾಗಿದೆ.
ವಿತ್ತ ಸಚಿವಾಲಯವು 2017-18ನೇ ಸಾಲಿನಲ್ಲಿ ರೈಲ್ವೆಗೆ 55,000 ಕೋ.ರೂ.ಗಳ ಮುಂಗಡಪತ್ರ ಬೆಂಬಲವನ್ನು ಒದಗಿಸಲಿದೆ.ಬಜೆಟ್‌ಗಳ ವಿಲೀನದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರೈಲ್ವೆಯು 2017-18ರಿಂದ ವಿತ್ತ ಸಚಿವಾಲಯಕ್ಕೆ ವಾರ್ಷಿಕ 9,000 ರೂ.ಗಳ ಡಿವಿಡೆಂಡ್ ಸಲ್ಲಿಸುವ ಅಗತ್ಯವಿರುವುದಿಲ್ಲ.ಹೊಸದಾಗಿ 3,500 ಕಿ.ಮೀ.ಉದ್ದದ ರೈಲುಮಾರ್ಗ ನಿರ್ಮಾಣದ ಜೊತೆಗೆ ಕನಿಷ್ಠ 25 ನಿಲ್ದಾಣಗಳನ್ನು ನವೀಕರಣಕ್ಕೊಳಪಡಿಸುವ ನಿರೀಕ್ಷೆಯಿದೆ.ಎಲ್ಲ ಬೋಗಿ ಸಂಬಂಧಿತ ದೂರುಗಳು ಮತ್ತು ಅಗತ್ಯಗಳನ್ನು ದಾಖಲಿಸಲು 'ಕೋಚ್ ಮಿತ್ರ ' ಹೆಸರಿನಲ್ಲಿ ಏಕ ಗವಾಕ್ಷಿಯನ್ನು ಸ್ಥಾಪಿಸಲಾಗುವುದು. ಎಲ್ಲ ಬೋಗಿಗಳು 2019ರ ವೇಳೆಗೆ ಜೈವಿಕ ಶೌಚಾಲಯಗಳನ್ನು ಹೊಂದಿರಲಿವೆ. ಘನತ್ಯಾಜ್ಯಗಳ ಪರಿಸರ ಸ್ನೇಹಿ ವಿಲೇವಾರಿಗಾಗಿ ಜೈಪುರ ಮತ್ತು ಹೊಸದಿಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾವರಗಳನ್ನು ಸ್ಥಾಪಿಸಲಾಗುವುದು.
500 ರೈಲು ನಿಲ್ದಾಣಗಳಲ್ಲಿ ಲಿಫ್ಟ್ ಮತ್ತು ಎಸ್ಕಲೇಟರಗಳನ್ನು ಅಳವಡಿಸುವ ಮೂಲಕ ಅವುಗಳನ್ನು ಅಂಗವಿಕಲ ಸ್ನೇಹಿಯನ್ನಾಗಿಸಲಾಗುವುದು. ಕೇಂದ್ರ ಸರಕಾರವು ನೂತನ ಮೆಟ್ರೋ ರೈಲು ನೀತಿಯನ್ನೂ ರೂಪಿಸಲಿದೆ.







