ಶಿವಮೊಗ್ಗದಲ್ಲಿ ಮುಂದುವರಿದ ನಕಲಿ ಪೊಲೀಸರ ಕೈಚಳಕ
ಶಿವಮೊಗ್ಗ, ಫೆ.1: ನಗರದಲ್ಲಿ ನಕಲಿ ಪೊಲೀಸರ ಕೈಚಳಕ ಮುಂದುವರಿದಿದೆ. ಮಂಗಳವಾರ ನಗರದ ಪಾರ್ಕ್ ಬಡಾವಣೆ ಮುಖ್ಯ ರಸ್ತೆಯಲ್ಲಿ ಹಾಡಹಗಲೇ ವಂಚಕರ ತಂಡವೊಂದು ಪೊಲೀಸರೆಂದು ಹೇಳಿಕೊಂಡು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಿಸಿದ್ದರು.
ಇದರ ಬೆನ್ನಲ್ಲೇ ಬುಧವಾರ ಕೂಡ ಪೊಲೀಸರೆಂದು ಹೇಳಿಕೊಂಡು ಹಾಡಹಗಲೇ ಮಹಿಳೆಯೊಬ್ಬರ ಬಂಗಾರದ ಸರ ಅಪಹರಿಸಿ ವಂಚಕರು ಪರಾರಿಯಾಗಿರುವ ಘಟನೆ ವರದಿಯಾಗಿದೆ. ನಗರದ ಕೋಟೆ ರಸ್ತೆಯ ಮಾರಿಕಾಂಬ ದೇವಾಲಯದ ಬಳಿ ಮಧ್ಯಾಹ್ನ ಈ ಘಟನೆ ನಡೆದಿದೆ. ಅಶೋಕ ರಸ್ತೆಯ ನಿವಾಸಿ ರಂಗಮ್ಮ (55) ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ.
ಸರಿಸುಮಾರು 16 ಗ್ರಾಂ ತೂಕದ ಬಂಗಾರದ ಸರವನ್ನು ವಂಚಕರು ಅಪಹರಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸಬ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಏನಾಯ್ತು?: ನಗರದಲ್ಲಿ ಸರಗಳ್ಳರ ಹಾವಳಿ ವಿಪರೀತವಾಗಿದೆ. ಈ ರೀತಿ ಮೈಮೇಲೆ ಬೆಲೆಬಾಳುವ ಆಭರಣ ಹಾಕಿಕೊಂಡು ಓಡಾಡಬಾರದು ಎಂದು ಹೇಳಿ ಮಹಿಳೆಯ ಬಳಿಯಿದ್ದ ಸರವನ್ನು ಅವರ ಕೈಯಿಂದಲೇ ವಂಚಕರು ಬಿಚ್ಚಿಸಿಕೊಂಡಿದ್ದಾರೆ. ಇದನ್ನು ಕವರ್‌ವೊಂದರಲ್ಲಿ ಸುತ್ತಿಕೊಟ್ಟು ಮನೆಗೆ ಕೊಂಡೊಯ್ದು ಬಿಚ್ಚುವಂತೆ ಸೂಚಿಸಿದ್ದಾರೆ.
ಆದರೆ ಮನೆಗೆ ತೆರಳಿದಾಗ ಸರ ಇಲ್ಲದಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಕೋಟೆ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜನನಿಬಿಡ ರಸ್ತೆಗಳಲ್ಲಿ ಹಾಡಹಗಲೇ ವಂಚಕರು ಪೊಲೀಸರೆಂದು ಹೇಳಿಕೊಂಡು ಮಹಿಳೆಯರಿಂದ ಚಿನ್ನಾಭರಣ ಅಪಹರಿಸುತ್ತಿರುವುದು ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ವಂಚಕರ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ.







