ವಲಸೆ ನಿರ್ಬಂಧಿತ ದೇಶಗಳ ಟ್ರಂಪ್ ಪಟ್ಟಿಗೆ ಪಾಕ್ ?

ವಾಷಿಂಗ್ಟನ್, ಫೆ. 1: ಜಾಗತಿಕ ಭಯೋತ್ಪಾದಕ ತಾಣ ಎಂದು ಬಿಂಬಿತವಾಗಿರುವ ಪಾಕಿಸ್ತಾನವನ್ನು ಕೂಡಾ ವಲಸೆ ನಿರ್ಬಂಧಿತ ದೇಶಗಳ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಶ್ವೇತಭವನ ಸುಳಿವು ನೀಡಿದೆ.
ಮುಸ್ಲಿಂ ಬಾಹುಳ್ಯದ ಏಳು ದೇಶಗಳಿಂದ ಜನರು ಅಮೆರಿಕಕ್ಕೆ ವಲಸೆ ಬರುವುದನ್ನು ನಿಷೇಧಿಸಿ ಟ್ರಂಪ್ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ "ಅಧ್ಯಕ್ಷ ಟ್ರಂಪ್ ಜತೆಗಿನ ಮಾಧ್ಯಮ ಸಂಬಂಧ" ವಿಷಯದ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್, "ಪಾಕಿಸ್ತಾನದ ಹೆಸರು ಏಕೆ ಸೇರಬಾರದು" ಎಂದು ಪ್ರಶ್ನಿಸಿದರು. ಬಹುಶಃ ನಾವು ಅದನ್ನು ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇರಾಕ್, ಸಿರಿಯಾ, ಸೂಡಾನ್, ಇರಾನ್, ಸೊಮಾಲಿಯಾ, ಲಿಬಿಯಾ ಮತ್ತು ಯೆಮನ್‌ನಿಂದ ಜನ ಅಮೆರಿಕಕ್ಕೆ ಬರುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಇದೀಗ ಪಾಕಿಸ್ತಾನ ಕೂಡಾ ಈ ಪಟ್ಟಿಗೆ ಸೇರುವುದು ಬಹುತೇಕ ಖಚಿತ.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಸೌದಿ ಅರೇಬಿಯಾವನ್ನು ಪಟ್ಟಿಯಲ್ಲಿ ಏಕೆ ಸೇರಿಸಿಲ್ಲ ಎಂಬ ಬಗ್ಗೆ ಅಧಿಕಾರಿಗಳಿಗೆ ವ್ಯಾಪಕ ಪ್ರಶ್ನೆಗಳು ಎದುರಾಗಿದ್ದವು. ಈ ಪಟ್ಟಿಯ ಭಾಗವಾಗುವ ಎಲ್ಲ ಅರ್ಹತೆಯೂ ಪಾಕಿಸ್ತಾನಕ್ಕೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.







