ದೀಪಕ್ ಮಿಂಚಿನ ಶತಕ, ಬರೋಡಾಕ್ಕೆ ಜಯ
ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ

ವಡೋದರ, ಫೆ.1: ದೀಪಕ್ ಹೂಡಾ ಬಾರಿಸಿದ ಮೂರನೆ ವೇಗದ ಶತಕದ ನೆರವಿನಿಂದ ಸೈಯದ್ ಮುಶ್ತಾಕ್‌ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಬರೋಡಾ ತಂಡ ಗುಜರಾತ್‌ನ ವಿರುದ್ಧ 15 ರನ್‌ಗಳ ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಅಂತರ್-ರಾಜ್ಯ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಕೇವಲ 51 ಎಸೆತಗಳನ್ನು ಎದುರಿಸಿದ ಹೂಡಾ 3 ಬೌಂಡರಿ, 9 ಸಿಕ್ಸರ್‌ಗಳನ್ನು ಒಳಗೊಂಡ 108 ರನ್ ಗಳಿಸಿ ಬರೋಡಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಕಲೆಹಾಕಲು ನೆರವಾದರು.
ವಿಷ್ಣು ಸೋಳಂಕಿ(42) ಅವರೊಂದಿಗೆ 3ನೆ ವಿಕೆಟ್‌ಗೆ 119 ರನ್ ಜೊತೆಯಾಟ ನಡೆಸಿದ ಹೂಡಾ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಕಾರಣರಾದರು. ಗುಜರಾತ್‌ನ ಮೂವರು ಬೌಲರ್‌ಗಳು ತಲಾ 2 ವಿಕೆಟ್ ಕಬಳಿಸಿದರು. ಈಶ್ವರ್ ಚೌಧರಿ(2-12) ಅತ್ಯಂತ ಮಿತವ್ಯಯಿ ಬೌಲರ್ ಎನಿಸಿಕೊಂಡರು.
ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಗುಜರಾತ್ ತಂಡ ಇನಿಂಗ್ಸ್‌ನ 4ನೆ ಓವರ್‌ನಲ್ಲಿ 3 ಎಸೆತಗಳ ಅಂತರದಲ್ಲಿ ಆರಂಭಿಕ ಆಟಗಾರರಾದ ಧ್ರುವ್ ರಾವಲ್ ಹಾಗೂ ಪ್ರಿಯಾಂಕ್ ಪಾಂಚಾಲ್ ವಿಕೆಟ್‌ನ್ನು ಕಳೆದುಕೊಂಡಿತು. ಮನ್‌ಪ್ರಿತ್ ಜುನೇಜ(20) ಔಟಾದಾಗ ಗುಜರಾತ್‌ನ ಸ್ಕೋರ್ 6.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 61.
ರಾಹುಲ್ ಭಟ್(34) ಹಾಗೂ ಚಿರಾಗ್ ಗಾಂಧಿ(56) ತಂಡವನ್ನು ಗೆಲುವಿನತ್ತ ಮುನ್ನಡೆಸುವ ವಿಶ್ವಾಸ ಮೂಡಿಸಿದ್ದರು. ಆದರೆ, ರನ್‌ರೇಟ್ ಏರತೊಡಗಿತು. 15ನೆ ಓವರ್‌ನಲ್ಲಿ ಭಟ್ ಔಟಾದರು. 11 ಎಸೆತಗಳಲ್ಲಿ 29 ರನ್ ಗಳಿಸಿದ ರೋಹಿತ್ ದಹಿಯಾ ತಂಡದ ಸೋಲಿನ ಅಂತರವನ್ನು ತಗ್ಗಿಸಿದರು. ಅಂತಿಮವಾಗಿ ಗುಜರಾತ್ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮುಂಬೈಗೆ ರೋಚಕ ಜಯ:
ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಮುಂಬೈ ತಂಡ ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು 2 ಎಸೆತ ಬಾಕಿಇರುವಾಗಲೇ 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಸೌರಾಷ್ಟ್ರದ 175 ರನ್‌ಗೆ ಉತ್ತರಿಸಹೊರಟಿರುವ ಮುಂಬೈ ಒಂದು ಹಂತದಲ್ಲಿ 15 ಓವರ್‌ಗಳಲ್ಲಿ 95 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಜೇಯ 76 ರನ್ ಗಳಿಸಿದ ಸ್ಟಾರ್ ಆಲ್‌ರೌಂಡರ್ ಅಭಿಷೇಕ್ ನಾಯರ್ ಮುಂಬೈ ಯಶಸ್ವಿಯಾಗಿ 176 ರನ್ ಬೆನ್ನಟ್ಟಲು ನೆರವಾದರು. ಆರನೆ ವಿಕೆಟ್‌ಗೆ ಶಶಾಂಕ್ ಸಿಂಗ್(ಅಜೇಯ 47,22 ಎಸೆತ) ಅವರೊಂದಿಗೆ 102 ರನ್ ಜೊತೆಯಾಟ ನಡೆಸಿದ ನಾಯರ್ ಮುಂಬೈ ಟೂರ್ನಿಯಲ್ಲಿ ಅಜೇಯ ದಾಖಲೆ ಕಾಯ್ದುಕೊಳ್ಳಲು ಮಹತ್ವದ ಕಾಣಿಕೆ ನೀಡಿದರು.
ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಸೌರಾಷ್ಟ್ರ ತಂಡ 53 ರನ್‌ಗೆ 3 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದುಕೊಂಡಿತ್ತು. ಚೇತೇಶ್ವರ ಪೂಜಾರ(47ರನ್, 42 ಎಸೆತ) ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಶೆಲ್ಡನ್ ಜಾಕ್ಸನ್(30) ಹಾಗೂ ರಾಜ್‌ದೀಪ್ ದರ್ಬಾರ್(37 ರನ್, 24 ಎಸೆತ) ಸೌರಾಷ್ಟ್ರ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. ಮುಂಬೈನ ಪ್ರಥಮೇಶ್ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳಿಂದ ದಂಡಿಸಲ್ಪಟ್ಟರು. ಪ್ರಥಮೇಶ್ 4 ಓವರ್‌ಗಳ ಬೌಲಿಂಗ್‌ನಲ್ಲಿ 55 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡರು.
ಅಂತರ್-ರಾಜ್ಯ ಟ್ವೆಂಟಿ-20 ಟೂರ್ನಿ: ಇತರ ಪಂದ್ಯಗಳ ಫಲಿತಾಂಶ
*ಧರ್ಮಶಾಲಾ: ಹರ್ಯಾಣ 114/7(20 ಓವರ್), ದಿಲ್ಲಿ 115/5(19 ಓವರ್)
ದಿಲ್ಲಿಗೆ 5 ವಿಕೆಟ್‌ಗಳ ಜಯ
*ಕೋಲ್ಕತಾ: ತ್ರಿಪುರಾ 192(19.5 ಓವರ್)-ಜಾರ್ಖಂಡ್ 168/6(20 ಓವರ್)
ತ್ರಿಪುರಾಕ್ಕೆ 24 ರನ್ ಜಯ
*ನಾಡೌನ್: ಜಮ್ಮು-ಕಾಶ್ಮೀರ 123(20 ಓವರ್), ಹಿಮಾಚಲ ಪ್ರದೇಶ 105/9(20 ಓವರ್)
ಜಮ್ಮು-ಕಾಶ್ಮೀರಕ್ಕೆ 18 ರನ್ ಜಯ
ಧರ್ಮಶಾಲಾ: ಪಂಜಾಬ್ 129/9(20 ಓವರ್), ಸರ್ವಿಸಸ್ 123/8(20 ಓವರ್), ಪಂಜಾಬ್‌ಗೆ 6 ರನ್ ಜಯ
ಕೋಲ್ಕತಾ: ಅಸ್ಸಾಂ 146/9(20 ಓವರ್), ಬಂಗಾಳ 150/0(16 ಓವರ್) ಬಂಗಾಳಕ್ಕೆ 10 ವಿಕೆಟ್‌ಗಳ ಜಯ







