ಸೇನಾ ಆಧುನೀಕರಣಕ್ಕೆ 86,488 ಕೋಟಿ ರೂ.

ಹೊಸದಿಲ್ಲಿ, ಜ. 1: 2017-18ರ ಸಾಲಿಗೆ ರಕ್ಷಣಾ ಇಲಾಖೆಗೆ 2.74 ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಳೆದ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಿರುವ 2.58 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ, ಈ ಬಾರಿ 6 ಶೇಕಡದಷ್ಟು ಹೆಚ್ಚಿಸಲಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸೇನಾ ವೆಚ್ಚದಲ್ಲಿ ಸರಾಸರಿ 10 ಶೇಕಡ ಹೆಚ್ಚಳವಾಗಿದೆ. ತನ್ನ ಸಾಮರ್ಥ್ಯವನ್ನು ವೃದ್ಧಿಸಲು ಹೆಣಗುತ್ತಿರುವ ಸೇನೆಯ ಪಾಲಿಗೆ ಇದು ನಿರಾಶಾದಾಯಕವಾಗಿದೆ. ಸೇನಾ ಪಿಂಚಣಿಯು ಬಜೆಟ್‌ನಲ್ಲಿ ಸೇರಿಲ್ಲ.ಸೇನಾ ಬಜೆಟ್‌ನಲ್ಲಿ 86,488 ಕೋಟಿ ರೂ. ಮೊತ್ತವನ್ನು ಆಧುನೀಕರಣಕ್ಕೆ ಮೀಸಲಿಡಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸೇನೆಗೆ ನಿಗದಿಪಡಿಸಲಾಗಿರುವ ಬಜೆಟ್ ಅದರ ಖರ್ಚುವೆಚ್ಚಗಳನ್ನು ಹೊಂದಿಸಲು ಸಾಕಾಗುತ್ತಿಲ್ಲ ಎಂದು ದೇಶದ ರಕ್ಷಣಾ ಯೋಜಕರು ಹಾಗೂ ಪರಿಣತರು ಹೇಳುತ್ತಾರೆ. ಯುದ್ಧ ವಿಮಾನಗಳು, ಸಬ್‌ಮರೀನ್‌ಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ ಹಳೆಯ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳಿಂದ ತುಂಬಿರುವ ಸೇನೆಯ ನಿರೀಕ್ಷೆಯ ಮಟ್ಟಕ್ಕೆ ಈ ಬಾರಿಯ ರಕ್ಷಣಾ ಬಜೆಟ್ ಏರಿಲ್ಲ.
ಸೇನಾ ವಿನಿಯೋಗವು 2014-15ರಲ್ಲಿದ್ದ 2.29 ಲಕ್ಷ ಕೋಟಿ ರೂ.ಯಿಂದ 2016-17ರಲ್ಲಿ 2.58 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ, ಇದರಲ್ಲಿ ಸೇನಾ ಪಿಂಚಣಿ ಒಳಗೊಂಡಿಲ್ಲ. ಆದಾಗ್ಯೂ, ಇದೇ ಅವಧಿಯಲ್ಲಿ ಆಧುನೀಕರಣಕ್ಕೆ ವಿನಿಯೋಗಿಸುವ ಮೊತ್ತವು 94,587.95 ಕೋಟಿ ರೂ.ಯಿಂದ 87,209.63 ಕೋಟಿ ರೂ.ಗೆ ಇಳಿಕೆಯಾಗಿದೆ.
ಗುಂಡುನಿರೋಧಕ ಕವಚಗಳು, ರಾತ್ರಿದರ್ಶಕ ಉಪಕರಣಗಳು ಮತ್ತು ರೈಫಲ್‌ಗಳಿಂದ ಹಿಡಿದು ಯುದ್ಧವಿಮಾನಗಳು ಮತ್ತು ಮುಂದಿನ ತಲೆಮಾರಿನ ಸಬ್‌ಮರೀನ್‌ಗಳು ಮುಂತಾದ ಹೈಟೆಕ್ ಸಲಕರಣೆಗಳವರೆಗೆ, ದೇಶದ ಹಲವಾರು ರಕ್ಷಣಾ ಆಧುನೀಕರಣ ಕಾರ್ಯಕ್ರಮಗಳು ನಿಧಿ ಕೊರತೆಯಿಂದಾಗಿ ಕುಂಟುತ್ತಾ ಸಾಗಿವೆ.







