ಭಾರತ ವಿರುದ್ಧ ಟೆಸ್ಟ್ ಪಂದ್ಯ: ಬಾಂಗ್ಲಾದೇಶ ತಂಡ ಪ್ರಕಟ
ಲಿಟನ್ ದಾಸ್‌ಗೆ ಸ್ಥಾನ

ಢಾಕಾ, ಫೆ.1: ಇತ್ತೀಚೆಗೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ದ್ವಿಶತಕ ಸಿಡಿಸಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಲಿಟನ್ ದಾಸ್ ಭಾರತ ವಿರುದ್ಧ ಫೆ.9 ರಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿರುವ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಮುಶ್ಫಿಕುರ್ರಹೀಂ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೊಮಿನುಲ್ ಹಕ್ ಹಾಗೂ ಇಮ್ರುಲ್ ಕಯೆಸ್, ವೇಗದ ಬೌಲರ್ ಶಫಿವುಲ್ ಇಸ್ಲಾಮ್‌ರೊಂದಿಗೆ ತಂಡಕ್ಕೆ ವಾಪಸಾಗಿದ್ದಾರೆ.
ಭುಜ ಶಸ್ತ್ರಚಿಕಿತ್ಸೆಯ ಬಳಿಕ ಇತ್ತೀಚೆಗಷ್ಟೇ ತಂಡಕ್ಕೆ ವಾಪಸಾಗಿದ್ದ ಎಡಗೈ ವೇಗದ ಬೌಲರ್ ಮುಸಾಫಿಝುರ್ರಹ್ಮಾನ್ ಸ್ನಾಯು ಸೆಳೆತದಿಂದಾಗಿ ನ್ಯೂಝಿಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ಗಳಿಂದ ವಂಚಿತರಾಗಿದ್ದರು.ಇದೀಗ ಅವರು ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ಆಯ್ಕೆಯಾಗಿಲ್ಲ.
ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ರಹೀಂ ಅನುಪಸ್ಥಿತಿಯಲ್ಲಿ ವಿಕೆಟ್‌ಕೀಪಿಂಗ್ ನಡೆಸಿದ್ದ ನುರುಲ್ ಹಸನ್‌ರನ್ನು ತಂಡದಿಂದ ಹೊರಗಿಟ್ಟಿರುವ ಆಯ್ಕೆಗಾರರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 51.75 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಲಿಟನ್ ದಾಸ್‌ಗೆ ಮಣೆ ಹಾಕಿದ್ದಾರೆ. ಮುಶ್ಫಿಕುರ್ರಹಿಂ, ಮೊಮಿನುಲ್ ಹಾಗೂ ಇಮ್ರುಲ್ ವಾಪಸಾತಿಯಿಂದಾಗಿ ಬಾಂಗ್ಲಾದೇಶದ ಬ್ಯಾಟಿಂಗ್ ಬಲಿಷ್ಠವಾಗಿದೆ.
ತಮೀಮ್ ಇಕ್ಬಾಲ್‌ರೊಂದಿಗೆ ಇನಿಂಗ್ಸ್ ಆರಂಭಿಸುತ್ತಿರುವ ಇಮ್ರುಲ್ ಅನುಪಸ್ಥಿತಿಯಲ್ಲಿ ಸೌಮ್ಯ ಸರ್ಕಾರ್ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದ್ದು, ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ಕ್ರಮವಾಗಿ 86 ಹಾಗೂ 36 ರನ್ ಗಳಿಸಿದ್ದರು.
ಬಾಂಗ್ಲಾದೇಶ 2000ರ ನವೆಂಬರ್‌ನಲ್ಲಿ ಢಾಕಾದಲ್ಲಿ ಭಾರತದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಇದೀಗ 16 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಮೊತ್ತ ಮೊದಲ ಬಾರಿ ಭಾರತದ ವಿರುದ್ಧ ಟೆಸ್ಟ್ ಪಂದ್ಯ ಆಡುತ್ತಿದೆ.
ಬಾಂಗ್ಲಾದೇಶ ಟೆಸ್ಟ್ ತಂಡ: ಮುಶ್ಫಿಕುರ್ರಹೀಂ(ನಾಯಕ, ವಿಕೆಟ್‌ಕೀಪರ್), ತಮೀಮ್ ಇಕ್ಬಾಲ್, ಶಬೀರ್ರಹ್ಮಾನ್,ಮಹಮ್ಮುದುಲ್ಲಾ, ಶಾಕಿಬ್ ಅಲ್ ಹಸನ್, ಮೆಹೆದಿ ಹಸನ್, ತೈಜುಲ್ ಇಸ್ಲಾಮ್, ಕಮ್ರುಲ್ ಇಸ್ಲಾಮ್, ಸೌಮ್ಯ ಸರ್ಕಾರ್, ಟಸ್ಕಿನ್ ಅಹ್ಮದ್, ಸುಭಾಶಿಸ್ ರಾಯ್, ಇಮ್ರುಲ್ ಕಯೆಸ್, ಲಿಟನ್ ದಾಸ್(ವಿಕೆಟ್‌ಕೀಪರ್), ಮೊಮಿನುಲ್ ಹಕ್, ಶಫಿವುಲ್ ಇಸ್ಲಾಮ್.







