ನೋಟು ನಿಷೇಧದ ನೀಳ ಗಾಯಕ್ಕೆ ತಕ್ಷಣದ ಮುಲಾಮು

ಇಂತಹದೊಂದು ಜನಪ್ರಿಯ ಸೋಗು ಹಾಕದೆ ಕೇಂದ್ರ ಸರಕಾರಕ್ಕೆ ಬೇರೆ ದಾರಿಯೇ ಇರಲಿಲ್ಲವೇನೋ? ಹಿಂದಿನ ಬಜೆಟ್‌ನಲ್ಲಿ ಅಭಿವೃದ್ಧಿಯ ದೂರಗಾಮಿ ನೆಪವೊಡ್ಡಿ ಶ್ರೀಸಾಮಾನ್ಯನ ಬದುಕನ್ನು ದೂರ ಇಟ್ಟಿತ್ತು. ಆದರೆ ಈ ಬಾರಿ ಕೇಂದ್ರ ಸರಕಾರದ ಸ್ಥಿತಿ ಚಿಂತಾಜನಕವಾಗಿದೆ. ಯಾವ ಅಭಿವೃದ್ಧಿ ಮಂತ್ರವನ್ನು ಈ ಹಿಂದೆ ಪಠಿಸಿತ್ತೋ, ಅದರ ಬಳಿ ಸಾಗುವುದು ಪಕ್ಕಕ್ಕಿರಲಿ, ಇರುವ ನಿರೀಕ್ಷೆಗಳನ್ನೂ ಸುಟ್ಟು ಹಾಕಿ, ಶ್ರೀಸಾಮಾನ್ಯನನ್ನು ನಡು ಬೀದಿಯಲ್ಲಿ ನಿಲ್ಲಿಸಿತ್ತು. ಆದುದರಿಂದ ಈ ಬಾರಿ ಅದು ಮಂಡಿಸಬೇಕಾಗಿದ್ದದ್ದು ಬಜೆಟನ್ನಲ್ಲ. ತಾನು ಅಸ್ತವ್ಯಸ್ತಗೊಳಿಸಿರುವ ಭಾರತದ ಅರ್ಥವ್ಯವಸ್ಥೆಯನ್ನು ಹೇಗೆ ಪುನರ್ ನಿರ್ಮಿಸಲಿದ್ದೇನೆ ಎಂಬ ಭರವಸೆಯನ್ನು ಬಜೆಟ್ ಮೂಲಕ ಜನರಿಗೆ ನೀಡಬೇಕಾಗಿತ್ತು. ನೋಟು ನಿಷೇಧ ಮತ್ತು ಅದರನಂತರ ದೇಶ ಅದರಿಂದ ತನ್ನದಾಗಿಸಿಕೊಂಡ ಲಾಭಗಳೆಷ್ಟು, ವಶಪಡಿಸಿಕೊಂಡ ಕಪ್ಪು ಹಣಗಳೆಷ್ಟು ಎನ್ನುವ ವಿವರಗಳೂ ಬಜೆಟ್‌ನಲ್ಲಿ ಬಹಿರಂಗವಾಗಬೇಕಾಗಿತ್ತು. ನೋಟು ನಿಷೇಧದಿಂದ ಆಗಿರುವ ಲಾಭಗಳನ್ನು ಜನರ ಮುಂದೆ ತೆರೆದಿಡುವ ಪ್ರಯತ್ನವನ್ನು ಈ ಬಾರಿ ಬಜೆಟ್ ಮಾಡುತ್ತದೆ ಎಂದು ಜನರೂ ನಿರೀಕ್ಷಿಸಿದ್ದರು. ಆದರೆ ಸರಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ.
ನೋಟು ನಿಷೇಧದಿಂದ ಗಾಯಗೊಂಡು ಬಿದ್ದಿರುವ ಭಾರತದ ಅರ್ಥವ್ಯವಸ್ಥೆಯನ್ನು ಸಂತೈಸುವ ಭಾಗವಾಗಿ ಕೆಲವು ಜನಪ್ರಿಯ ಮುಲಾಮುಗಳನ್ನು ಹಚ್ಚುವ ಯತ್ನ ಮಾಡಿದೆ. ಆದರೆ ಆಗಿರುವ ಗಾಯದ ಆಳವನ್ನು ಗಮನಿಸಿದರೆ ಈ ಮುಲಾಮು ಯಾವ ರೀತಿಯಲ್ಲೂ ತನ್ನ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ತನ್ನ ನೋಟು ನಿಷೇಧವೆನ್ನುವ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರಾಣ ತೆತ್ತ ಅಮಾಯಕ ಗ್ರಾಮೀಣ ಅರ್ಥವ್ಯವಸ್ಥೆಯನ್ನು ಮೇಲೆತ್ತಿ ನಿಲ್ಲಿಸುವ ಯಾವ ಶಕ್ತಿಯೂ ಬಜೆಟ್‌ಗಿಲ್ಲ. ಆದುದರಿಂದ, ಸದ್ಯಕ್ಕೆ ಪಂಚ ರಾಜ್ಯಗಳಲ್ಲಿ ಘೋಷಣೆಯಾಗಿರುವ ಚುನಾವಣೆಯಲ್ಲಿ ತನ್ನ ವರ್ಚಸ್ಸನ್ನು ಅಲ್ಪಪ್ರಮಾಣದಲ್ಲಾದರೂ ಉಳಿಸಿಕೊಳ್ಲುವ ಪ್ರಯತ್ನವಾಗಿ ಬಜೆಟ್‌ನ್ನು ನಾವು ನೋಡಬೇಕಾಗಿದೆ. ಬಜೆಟ್‌ನ ಯೋಜನೆಗಳು ಹಲವು ವಿರೋಧಾಭಾಸಗಳಿಂದ ಕೂಡಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮಾತುಗಳನ್ನಾಡುತ್ತದೆಯಾದರೂ, ಅದಕ್ಕೆ ಪೂರಕವಾದ ಯೋಜನೆಗಳು ಪ್ರಕಟವಾಗಿಲ್ಲ. ನೋಟು ನಿಷೇಧದಿಂದ ಗ್ರಾಮೀಣ ಪ್ರದೇಶದ ಕೃಷಿ ಉದ್ಯಮ ಭಾರೀ ಪ್ರಮಾಣದಲ್ಲಿ ನೆಲಕಚ್ಚಿದೆ. ಹಾಗೆಯೇ ಸಣ್ಣ ಮಧ್ಯಮ ಗಾತ್ರದ ಕೈಗಾರಿಕೆಗಳು, ಗುಡಿಕೈಗಾರಿಗಳ ಮೇಲೂ ದುಷ್ಪರಿಣಾಮವುಂಟು ಮಾಡಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಚಿಲ್ಲರೆ ವ್ಯಾಪಾರಗಳಿಗೂ ಹಾನಿಯಾಗಿದೆ. ಇದರಿಂದಾಗಿ ನಿರುದ್ಯೋಗದ ಸಮಸ್ಯೆ ಅಧಿಕವಾಗಲಿದೆ. ಸಂಪೂರ್ಣ ಡಿಜಿಟಲೀಕರಣದ ಯೋಜನೆಗಳಿಗೆ ಇನ್ನಷ್ಟು ಕಸುವು ತುಂಬಲು ಬಜೆಟ್ ಪ್ರಯತ್ನಿಸುತ್ತಿರುವುದು ಅಂತಿಮವಾಗಿ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.
ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೀಕರಣ ಪೂರ್ಣ ಪ್ರಮಾಣದಲ್ಲಿ ಕಷ್ಟಸಾಧ್ಯವಾಗುವುದರಿಂದ, ಅಲ್ಲಿನ ವಿವಿಧ ಕ್ಷೇತ್ರಗಳ ಸಂಕಟಗಳೂ ಇನ್ನಷ್ಟು ತೀವ್ರವಾಗಲಿವೆ. ಬ್ಯಾಂಕ್ ಮೂಲಕವೇ ವ್ಯವಹಾರ ಎನ್ನುವ ಸರಕಾರ, ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳು ತನ್ನ ವ್ಯಾಪ್ತಿಯನ್ನು ಇನ್ನೂ ಹಿಗ್ಗಿಸಿಕೊಂಡಿಲ್ಲ ಎನ್ನುವುದನ್ನು ಸಂಪೂರ್ಣ ಮರೆತಿದೆ. ಹಲವು ಗ್ರಾಮೀಣ ಪ್ರದೇಶಗಳಿಗೆ ಎಟಿಎಂ ಕಾಲೇ ಇಟ್ಟಿಲ್ಲ. ಬ್ಯಾಂಕ್‌ನ ಶಾಖೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವ ಕುರಿತಂತೆ ಯಾವುದೇ ಸ್ಪಷ್ಟ ನಕಾಶೆಯಿಲ್ಲ. ಡಿಜಿಟಲೀಕರಣಗೊಂಡ ಅರ್ಥವ್ಯವಸ್ಥೆ ಮತ್ತು ಗ್ರಾಮೀಣ ಪ್ರದೇಶ ಸಮಾನಾಂತರ ರೇಖೆಗಳಲ್ಲಿ ಚಲಿಸುತ್ತಿವೆ. ಇವುಗಳನ್ನು ಒಟ್ಟು ಸೇರಿಸುವ ಬಿಂದುವೊಂದನ್ನು ಕಂಡುಕೊಳ್ಳಲು ಬಜೆಟ್ ವಿಫಲವಾಗಿದೆ. ಒಂದು ಕಾಲದಲ್ಲಿ ಯುಪಿಎ ಸರಕಾರ ಜಾರಿಗೊಳಿಸಿರುವ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಮೇಲೆ ಎನ್‌ಡಿಎ ಸರಕಾರ ಗಟ್ಟಿ ನಂಬಿಕೆಯನ್ನು ಇರಿಸಿಕೊಂಡಿರುವುದು ಅಭಿನಂದನಾರ್ಹ.
‘ಯುಪಿಎ ವೈಫಲ್ಯದ ಸ್ಮಾರಕ’ ಎಂದು ಒಂದು ಕಾಲದಲ್ಲಿ ಈ ಯೋಜನೆಯನ್ನು ಮೋದಿಯವರು ಟೀಕಿಸಿದ್ದರು. ಇದೀಗ ಆ ಯೋಜನೆಗೆ ಭಾರೀ ಪ್ರಮಾಣದಲ್ಲಿ ಹಣ ಒದಗಿಸಿದ್ದಾರೆ. ಆದರೆ ಮೋದಿಯ ನೋಟು ನಿಷೇಧ ಈ ಯೋಜನೆಯ ಮೇಲೂ ತನ್ನ ಪರಿಣಾಮವನ್ನು ಬೀರಿದೆ ಎಂಬ ಅಂಶವನ್ನು ಅವರು ಮರೆತಿದ್ದಾರೆ. ಆದಾಯ ತೆರಿಗೆಯಲ್ಲಿ ಗಮನಾರ್ಹ ಕಡಿತವನ್ನು ಮಾಡುವ ಮೂಲಕ, ನೋಟು ನಿಷೇಧದ ಗಾಯಗಳಿಗೆ ಸಣ್ಣದೊಂದು ಮುಲಾಮನ್ನು ಈ ಬಜೆಟ್‌ನಲ್ಲಿ ಒದಗಿಸಿದ್ದಾರೆ. ಎರಡೂವರೆ ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯವಿರುವವರಿಗೆ ಶೇ. 10ರಷ್ಟಿದ್ದ ತೆರಿಗೆಯನ್ನು ಶೇ.5ಕ್ಕೆ ಇಳಿಸಲಾಗಿದೆ. ಎರಡೂವರೆಗೆ ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವ ತೆರಿಗೆಯನ್ನು ವಿಧಿಸಲಾಗಿಲ್ಲ. ಆದರೆ ಇಂದು ನಗದಿನ ಮೇಲೆ ವಿಧಿಸಲಾಗಿರುವ ಮಿತಿ, ಈ ತೆರಿಗೆ ವಿನಾಯಿತಿಯ ಲಾಭವನ್ನು ಬೇರೆ ಬೇರೆ ರೂಪಗಳಲ್ಲಿ ವಸೂಲು ಮಾಡುತ್ತದೆ ಎನ್ನುವ ಅಂಶ ಗುಟ್ಟಾಗಿಯೇನೂ ಇಲ್ಲ. ನೋಟು ನಿಷೇಧದಿಂದ ಸಂಕಷ್ಟಕ್ಕೆ ಬಿದ್ದಿರುವ ಮಧ್ಯಮ, ಮೇಲ್ಮಧ್ಯಮ ವರ್ಗದ ಒಂದು ನಿರ್ದಿಷ್ಟ ಜನರನ್ನು ಈ ಬಜೆಟ್ ಒಂದಿಷ್ಟು ಸಾಂತ್ವನಗೊಳಿಸಬಹುದು. ಆದರೆ, ಕೆಲವು ಅಸಂಘಟಿತ ಕ್ಷೇತ್ರಗಳಿಗೆ, ಉದ್ದಿಮೆಗಳಿಗೆ ಆಗಿರುವ ಹಾನಿಯನ್ನು ಬಜೆಟ್ ಯಾವ ರೀತಿಯಲ್ಲೂ ತುಂಬಿಕೊಡುವುದಿಲ್ಲ. ಆದುದರಿಂದಲೇ ಕೃಷಿಕರ ಆದಾಯವನ್ನು ಐದು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಿಸುವ ಸರಕಾರದ ಗುರಿಯನ್ನು ನಾವು ಅನುಮಾನದಿಂದ ನೋಡಬೇಕಾಗುತ್ತದೆ.
ಈ ಬಾರಿ ಮುಖ್ಯ ಬಜೆಟ್‌ನ ನಡುವೆ ರೈಲ್ವೆ ಬಜೆಟ್ ವಿಲೀನವಾಗಿರುವುದರಿಂದ, ಅದರ ಕುರಿತ ಚರ್ಚೆ ಮುನ್ನೆಲೆಗೆ ಬರಲೇ ಇಲ್ಲ. ರೈಲ್ವೆ ಸುರಕ್ಷತೆಯ ಕುರಿತಂತೆ ಸರಕಾರ ಆದ್ಯತೆಯನ್ನು ನೀಡಿದೆ. ಉಳಿದಂತೆ, ಈ ಹಿಂದೆ ಹಲವು ಬಾರಿ ಘೋಷಿಸಲ್ಪಟ್ಟ ಯೋಜನೆಗಳನ್ನು ಪುನರಪಿ ಜಪಿಸಿದೆ. ರೈಲ್ವೆಯಲ್ಲಿ ಶ್ರೀಸಾಮಾನ್ಯನ ಪಾಲುದಾರಿಕೆಯನ್ನು ಸಂಪೂರ್ಣ ಮರೆತು ಬಿಡಲಾಗಿದೆ. ಮುಂದಿನ ದಿನಗಳಲ್ಲಿ ರೈಲ್ವೆ ಶ್ರೀಮಂತರಿಗೆ ಮೀಸಲಾಗುತ್ತದೆಯೇ ಎಂಬ ಆತಂಕ ಶ್ರೀಸಾಮಾನ್ಯನದಾಗಿದೆ. ನಿಧಾನಕ್ಕೆ ರೈಲ್ವೇ ಇಲಾಖೆಯ ಹೊಣೆಗಾರಿಕೆಯಿಂದ ಸರಕಾರ ಕಳಚಿಕೊಂಡು, ಅದರ ಸುಧಾರಣೆಯ ಹೊಣೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವುದರ ಮೊದಲ ಹಂತವೇ, ರೈಲ್ವೆ ಬಜೆಟ್ ವಿಲೀನವಾಗಿರುವುದು. ಹೊಸ ರೈಲುಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಬೃಹತ್ ಯೋಜನೆಗಳ ಮರೆಯಲ್ಲಿ ಶ್ರೀಸಾಮಾನ್ಯನ ರೈಲು ಹಳಿ ತಪ್ಪಿರುವುದಂತೂ ಸ್ಪಷ್ಟವಾಗಿದೆ. ಒಟ್ಟಿನಲ್ಲಿ, ನೋಟು ನಿಷೇಧದ ಬಳಿಕ ಬಜೆಟ್‌ನ ಘೋಷಣೆಗಳಿಗಾಗಿ ಭಾರೀ ನಿರೀಕ್ಷೆಯಿಂದ ಕಾಯುತ್ತಿದ್ದ ಶ್ರೀಸಾಮಾನ್ಯನಿಗೆ ಜೇಟ್ಲಿ ನಿರಾಸೆಯನ್ನು ಮಾಡಿದ್ದಾರೆ. ಬರೇ ಜನಪ್ರಿಯ ತಂತ್ರ, ಸೋಗುಗಳಿಂದ ಕೂಡಿರುವ ಈ ಬಜೆಟ್‌ಗೆ ದೇಶವನ್ನು ಮೇಲೆತ್ತುವ ಯಾವ ಒಳ ಶಕ್ತಿಯೂ ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ.







