ಭಾರತೀಯ ಉದ್ಯಮಿಯಿಂದ ದುಬೈನ ದುಬಾರಿ ಆಸ್ತಿ ಖರೀದಿ

ದುಬೈ, ಫೆ.3: ಯುನೈಟೆಡ್ ಅರಬ್ ಎಮಿರೇಟ್ಸ್ ಬಗ್ಗೆ ಹಲವು ಕಥೆಗಳು ಹುಟ್ಟಿಕೊಂಡಿದ್ದು, ಜನ ಉದ್ಯೋಗ ಕಳೆದುಕೊಳ್ಳುತ್ತಿರುವುದು, ಕಂಪನಿಗಳು ವೆಚ್ಚ ಕಡಿತಗೊಳಿಸುವುದು ಹೀಗೆ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಿರೀಕ್ಷೆಯ ಮಿಂಚು ಮೂಡಿದೆ. ಅದರಲ್ಲೂ ಮುಖ್ಯವಾಗಿ ಕಿಸೆ ಗಟ್ಟಿ ಇರುವವರಲ್ಲಿ ಇಂಥ ನಿರೀಕ್ಷೆ ಅಧಿಕವಾಗಿದೆ.
ಇತ್ತೀಚೆಗೆ ಭಾರತ ಮೂಲದ ಉದ್ಯಮಿಯೊಬ್ಬರು 53 ದಶಲಕ್ಷ ದಿರ್ಹಂ (14.4 ದಶಲಕ್ಷ ಡಾಲರ್) ವೆಚ್ಚದಲ್ಲಿ ದುಬಾರಿ ಮಾನ್ಷನ್ ಖರೀದಿಸಿದ್ದಾರೆ. 39 ಸಾವಿರ ಚದರ ಅಡಿಯ ಭೂಮಿಯಲ್ಲಿ ನಿರ್ಮಿಸಲಾಗಿರುವ ಈ ಭವ್ಯ ಬಂಗಲೆ ಫುಟ್‌ಬಾಲ್ ಮಿಚ್‌ನ ಅರ್ಧದಷ್ಟಿದೆ. ದುಬೈನ ಭೂ ವ್ಯವಹಾರ ಇಲಾಖೆಯ ಪ್ರಕಾರ ಇದು ಕಳೆದ ವರ್ಷ ಮಾಡಲಾದ ಅತ್ಯಂತ ದುಬಾರಿ ಖರೀದಿ ಎನಿಸಿಕೊಂಡಿದೆ. ಅಗರ್ಭ ಶ್ರೀಮಂತರಿಗೆ ದುಬೈ ಇನ್ನೂ ಆಕರ್ಷಕ ತಾಣವಾಗಿಯೇ ಉಳಿದಿದೆ ಎನ್ನುವುದಕ್ಕೆ ಇದು ಸಾಕ್ಷಿ.
24 ಸಾವಿರ ಚದರ ಅಡಿಯ ಈ ಬಂಗಲೆ ದುಬೈನ ಎಮಿರೇಟ್ಸ್ ಹಿಲ್‌ನಲ್ಲಿದೆ. ಈಜುಕೊಳ, ಆರು ಬೆಡ್‌ರೂಂ ಒಳಗೊಂಡಿರುವ ಈ ಬಂಗಲೆಯನ್ನು ವಾಸಕ್ಕಾಗಿ ಖರೀದಿ ಮಾಡಲಾಗಿದೆ. ಇದರ ಬೆಲೆ ಕೂಡಾ ಆ ಪ್ರದೇಶದ ವಿಲ್ಲಾಗಳ ಬೆಲೆಯ ಪ್ರಮಾಣಕ್ಕಿಂತ ಅಧಿಕ.
ಆದರೆ ಭದ್ರತಾ ಕಾರಣಗಳಿಗಾಗಿ ಆ ವ್ಯಕ್ತಿಯ ಗುರುತು ಬಹಿರಂಗಪಡಿಸಿಲ್ಲ. ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನೆಲ ಕಚ್ಚಿದ ಅವಧಿಯಲ್ಲಿ ಇಂಥ ದೊಡ್ಡ ಡೀಲಿಂಗ್ ನಡೆದಿರುವುದು ಹಲವರ ಹುಬ್ಬೇರಿಸಿದೆ. ಸಾಲದ ನಿಯಮಾವಳಿ ಬಿಗಿಗೊಳಿಸಿರುವುದು ಹಾಗೂ ತೈಲ ಬೆಲೆ ಕುಸಿತ ಇದಕ್ಕೆ ಮುಖ್ಯ ಕಾರಣ. ಇಷ್ಟಾಗಿಯೂ ಶ್ರೀಮಂತ ಖರೀದಿದಾರರಿಗೆ ದುಬೈ ಇನ್ನೂ ಆಕರ್ಷಕ ತಾಣ.








