ಆಸಿಡ್ ದಾಳಿ ಸಂತ್ರಸ್ತರಿಗೆ ಲಕ್ಷ ರೂಪಾಯಿ ಅಧಿಕ ಪರಿಹಾರ

ಹೊಸದಿಲ್ಲಿ, ಫೆ.3: ಆಸಿಡ್ ದಾಳಿ ಸಂತ್ರಸ್ತರಿಗೆ ತಕ್ಷಣದ ಪರಿಹಾರವಾಗಿ ಒಂದು ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರವನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅನುಮೋದಿಸಿದ್ದಾರೆ. ಗೃಹಸಚಿವಾಲಯದ ಕೇಂದ್ರ ಸಂತ್ರಸ್ತರ ಪರಿಹಾರ ನಿಧಿ ಯೋಜನೆಯಡಿ ರಾಜ್ಯ ಸರಕಾಗಳು ಆಸಿಡ್ ದಾಳಿ ಸಂತ್ರಸ್ತರಿಗೆ ಕನಿಷ್ಠ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ.
ಇದೀಗ ಪಿಎಂಎನ್‌ಆರ್‌ಎಫ್ ಮೂಲಕ ಮೂರು ಲಕ್ಷವಲ್ಲದೇ ಹೆಚ್ಚುವರಿಯಾಗಿ ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. ಆಸಿಡ್ ದಾಳಿ ಪ್ರಕರಣಗಳನ್ನು ಭಾರತ ಸರಕಾರ ಆದ್ಯತೆಯ ಮೇಲೆ ಪರಿಗಣಿಸುತ್ತದೆ. ಈ ಸಂಬಂಧ ಭಾರತೀಯ ದಂಡಸಂಹಿತೆಯ ಕೆಲ ವಿಧಿಗಳಿಗೂ ತಿದ್ದುಪಡಿ ತರಲಾಗಿದೆ. ಹೆಚ್ಚುವರಿ ಪರಿಹಾರಕ್ಕೆ ಅನುಸರಿಸಬೇಕಿರುವ ಪ್ರಮುಖ ಮಾರ್ಗಸೂಚಿ ಎಂದರೆ, ಜಿಲ್ಲಾಧಿಕಾರಿ ಈ ಸಂಬಂಧ ಗೃಹಸಚಿವಾಲಯಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿಯ ವರದಿ ಬಂದು 5 ದಿನಗಳ ಒಳಗಾಗಿ ಸಂತ್ರಸ್ತರ ಖಾತೆಗೆ ಒಂದು ಲಕ್ಷ ರೂಪಾಯಿ ಜಮಾ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ. ಈ ನಿಧಿಗಾಗಿ ಸಂತ್ರಸ್ತರು ಆಧಾರ್ ಕಾರ್ಡ್ ವಿವರಗಳನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮಹಿಳೆಯರ ಕನಿಷ್ಠ ಸುರಕ್ಷತೆಯ ರಾಜ್ಯಗಳಾಗಿವೆ.





