ಕೋಟ್ಯಂತರ ರೂ. ಆನ್‌ಲೈನ್ ವಂಚನೆ ಜಾಲ ಭೇದಿಸಿದ ಉತ್ತರ ಪ್ರದೇಶ ಪೊಲೀಸರು
3,700 ಕೋಟಿ ರೂ. ವಂಚಿಸಿದ ಮೂವರು ಆರೋಪಿಗಳ ಬಂಧನ

ನೊಯ್ಡ, ಫೆ.3: ಆನ್‌ಲೈನ್ ವೆಬ್‌ಸೈಟ್ ಮೂಲಕ ಸುಮಾರು 6.5 ಲಕ್ಷ ಜನರಿಗೆ 3,700 ಕೋಟಿ ರೂ. ವಂಚನೆ ಮಾಡಿರುವ ಮೂವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಅತ್ಯಂತ ದೊಡ್ಡ ಅಂತರ್ಜಾಲ ವಂಚನೆ ಪ್ರಕರಣವನ್ನು ಭೇದಿಸಿರುವ ವಿಶೇಷ ಕಾರ್ಯಪಡೆ(ಎಸ್‌ಟಿಎಫ್)ಪೊಲೀಸರು ಮೂವರು ಆರೋಪಿಗಳಾದ ಅನುಭವ್ ಮಿತ್ತಲ್, ಶ್ರೀಧರ್ ಪ್ರಸಾದ್ ಹಾಗೂ ಮಹೇಶ್ ದಯಾಳ್‌ರನ್ನು ಬುಧವಾರ ನೊಯ್ಡದಲ್ಲಿ ಬಂಧಿಸಿದ್ದು, ಸುಮಾರು 500 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ‘ಸೋಶಿಯಲ್ ಟ್ರೇಡ್‌ಡಾಟ್‌ಬ್ಲಿಝ್’ ಹೆಸರಿನ ವೆಬ್‌ಸೈಟ್‌ನ್ನು ನಡೆಸುತ್ತಿದ್ದರು. ವೆಬ್‌ಸೈಟ್‌ನಲ್ಲಿ ಹೂಡಿಕೆ ಮಾಡುವವರು ಕಂಪೆನಿಯ ಖಾತೆಗೆ 5,750 ರಿಂದ 57,500 ರೂ. ಪಾವತಿಸಿ ಸದಸ್ಯತ್ವ ಪಡೆಯಬೇಕು. ಆ ನಂತರ ಪ್ರತಿ ಕ್ಲಿಕ್‌ಗೆ 5 ರೂ. ಪಡೆಯಬಹುದಾಗಿತ್ತು.
ನೊಯ್ಡದ ಅಲ್ಬೇಝ್ ಇನ್‌ಫೋ ಸೊಲುಶನ್ ಪ್ರೈ ಲಿ.ನಲ್ಲಿ ನೊಂದಣಿಯಾಗಿರುವ ವೆಬ್‌ಸೈಟ್‌ನಲ್ಲಿ ಪದೇ ಪದೇ ಹೆಸರು ಬದಲಾವಣೆ ಮಾಡಲಾಗುತ್ತಿತ್ತು. ಈತನಕ ಸುಮಾರು 6.5 ಲಕ್ಷ ಜನರಿಗೆ 3,700 ಕೋ.ರೂ. ಮೋಸ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಮಿತ್ತಲ್ ಗಾಝಿಯಾಬಾದ್‌ನ ಬಿಟೆಕ್ ಪದವೀಧರನಾಗಿದ್ದರೆ, ಪ್ರಸಾದ್ ಆಂಧ್ರಪ್ರದೇಶದ ವಿಶಾಖಪಟ್ಟಣ ಹಾಗೂ ದಯಾಳ್ ಉತ್ತರಪ್ರದೇಶದ ಮಥುರಾದವನಾಗಿದ್ದಾನೆ.
2015ರಲ್ಲಿ ಆರಂಭವಾಗಲಿರುವ ಈ ವೆಬ್‌ಸೈಟ್ ಹೂಡಿಕೆದಾರರಿಗೆ ಹಣ ಗಳಿಕೆಗೆ ನಾಲ್ಕು ವಿಭಿನ್ನ ‘ಪ್ಯಾಕೇಜ್’ಗಳ ಆಫರ್ ನೀಡುತ್ತಿತ್ತು. ಕಂಪೆನಿ ಖಾತೆಗೆ ಹಣ ಜಮೆ ಮಾಡಿದ ಬಳಿಕ ಹೂಡಿಕೆದಾರರಿಗೆ ಪೇಜ್‌ಗಳನ್ನು ಲೈಕ್ ಮಾಡಿ ಲಿಂಕ್‌ಗೆ ಕ್ಲಿಕ್ ಮಾಡಲು ಹೇಳಲಾಗುತ್ತದೆ. ಪ್ರತಿಕ್ಲಿಕ್‌ನಿಂದ ತಮಗೆ ಆರು ರೂ. ಲಾಭ ಸಿಗಲಿದ್ದು, ಇದರಲ್ಲಿ 5 ರೂ.ವನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿತ್ತು. ಆದರೆ, ಕಂಪೆನಿಯು ಕಳುಹಿಸುವ ಲಿಂಕ್‌ಗಳು ನಕಲಿ ಎಂದು ಪತ್ತೆಯಾಗಿದೆ







