ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ

ಬೆಂಗಳೂರು, ಫೆ.3: ನಗರದ ಸದಾಶಿವ ನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಾಗಿದೆ.
ಐದೂವರೆ ವರ್ಷಗಳಿಂದ ಪ್ರಿನ್ಸಿಪಾಲ್ ಆಗಿರುವ ಆರೋಪಿ ಕುಮಾರ್ ಠಾಕೂರ್ 10 ಹಾಗೂ 12ನೆ ತರಗತಿಯ ಹೆಣ್ಣು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಮಾತ್ರವಲ್ಲ ಶಿಕ್ಷಕಿಯರಿಗೆ ವ್ಯಾಟ್ಸಪ್ ಮೂಲಕ ಕೆಟ್ಟ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ.
ಶಿಕ್ಷಕಿಯರು ಚೈಲ್ಡ್‌ಲೈನ್‌ನ ನೋಡಲ್ ಅಧಿಕಾರಿ ವಾಸುದೇವ ಮೂರ್ತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶಾಲೆಗೆ ಭೇಟಿ ನೀಡಿದ್ದ ಪೊಲೀಸರು ಕಿರುಕುಳಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದರು. ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜ.26 ರಂದು ಸದಾಶಿವ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿ ಪ್ರಿನ್ಸಿಪಾಲ್ ವಿರುದ್ದ ಫೋಕ್ಸೊ ಕಾಯ್ದೆ ಅಡಿ ಜ.31 ರಂದು ಪ್ರಕರಣ ದಾಖಲಾಗಿದೆ. ದೂರುದಾರರು ಹಾಗೂ ಸಂತ್ರಸ್ತರ ಹೇಳಿಕೆ ಪಡೆದಿದ್ದೇವೆ. ವಿದ್ಯಾರ್ಥಿನಿಯರಿಗೆ ಪ್ರಿನ್ಸಿಪಾಲ್ ಯಾವುದೇ ರೀತಿಯ ದೈಹಿಕ ಕಿರುಕುಳ ನೀಡಿಲ್ಲ. ಆದರೆ, ಮಾನಸಿಕ ಕಿರುಕುಳ ಹಾಗೂ ಕೆಟ್ಟ ಪದ ಬಳಸಿದ್ದಾರೆ. ಇದು ಫೋಕ್ಸೊ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸುದ್ದಿಗಾರರಿಗೆ ತಿಳಿಸಿದ್ದಾರೆ





