ಪ್ರಣವ್‌ಗೆ ಎರಡನೇ ಅವಧಿ ಕುರಿತು ನಿರ್ಧಾರ ತೆಗೆದುಕೊಂಡ ಕೇಂದ್ರ

ಹೊಸದಿಲ್ಲಿ,ಫೆ.3: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಬಳಿಕ ನೂತನ ರಾಷ್ಟ್ರಪತಿಯ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಸಂಸತ್ತು ತಯಾರಿಗಳನ್ನು ಆರಂಭಿಸಿದೆ ಎಂದು ತಿಳಿದುಬಂದಿದೆ.
ಹಾಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಅಧಿಕಾರಾವಧಿ ಈ ವರ್ಷದ ಜುಲೈನಲ್ಲಿ ಅಂತ್ಯಗೊಳ್ಳಲಿದ್ದು, ಅಧ್ಯಕ್ಷೀಯ ಚುನಾವಣಾ ಘಟಕ (ಪಿಇಸಿ)2017ನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದಕ್ಕಾಗಿ ಜ.30ರಂದು ಸಂಸತ್ ಭವನದಲ್ಲಿಯ ಎರಡು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖರ್ಜಿಯವರು ರಾಷ್ಟ್ರಪತಿಯಾಗಿ 2012,ಜು.25ರಂದು ಅಧಿಕಾರ ಸ್ವೀಕರಿಸಿದ್ದು, ಈ ವರ್ಷದ ಜು.25ರೊಳಗೆ ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಬೇಕಾಗಿದೆ.
ಭಾರತದ 13ನೇ ರಾಷ್ಟ್ರಪತಿಯಾಗಿರುವ ಮುಖರ್ಜಿಯವರ ಅಧಿಕಾರಾವಧಿ ಮುಗಿದ ಬಳಿಕ ಅವರ ವಾಸಕ್ಕಾಗಿ ದಿಲ್ಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಬಂಗಲೆ ಯೊಂದನ್ನು ಗುರುತಿಸಲಾಗಿದ್ದು, ಅದಕ್ಕೆ ರಾಷ್ಟ್ರಪತಿಗಳ ಸಚಿವಾಲಯವು ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿಗಳ ನಿವೃತ್ತಿ ನಿಯಮಾವಳಿಗಳು,1962ರಂತೆ ನಿವೃತ್ತ ರಾಷ್ಟ್ರಪತಿಗಳು ಭಾರತದಲ್ಲಿ ತಾವು ಇಚ್ಛಿಸುವ ಪ್ರದೇಶದಲ್ಲಿ ತಮ್ಮ ಜೀವಿತಾವಧಿಯವರೆಗೆ ಉಚಿತ ನೀರು ಮತ್ತು ವಿದ್ಯುತ್ ಸೌಲಭ್ಯಗಳೊಡನೆ ವಿಸ್ತೀರ್ಣದಲ್ಲಿ ಕೇಂದ್ರದ ಸಂಪುಟ ಸಚಿವರಿಗೆ ನೀಡಲಾಗುವ ಬಂಗಲೆಗೆ ಸಮನಾದ ಬಾಡಿಗೆರಹಿತ ವಸತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ದೂರವಾಣಿ,ಅಂತರ್ಜಾಲ ಸಂಪರ್ಕದಂತಹ ಸೌಲಭ್ಯಗಳೊಡನೆ ಕಚೇರಿ ಸಿಬ್ಬಂದಿ ಮತ್ತು ಕಾರನ್ನು ಒದಗಿಸಲಾಗುತ್ತದೆ. ಅವರು ಸ್ವಂತ ಕಾರನ್ನು ಬಳಸಿದರೆ ಪ್ರತಿ ತಿಂಗಳು 250 ಲೀ.ಪೆಟ್ರೋಲ್ ಮತ್ತು ಚಾಲಕನ ವೇತನವನ್ನು ಸರಕಾರವೇ ಪಾವತಿಸುತ್ತದೆ.







