ನಗರಗಳ ಅಭಿವೃದ್ದಿಗೆ ಸ್ಮಾರ್ಟ್ ಸಿಟಿ ಯೋಜನೆ ಅತ್ಯಗತ್ಯ: ರೋಶನ್ ಬೇಗ್
‘ಸ್ಮಾರ್ಟ್ ಸಿಟಿ’ ರಾಜ್ಯ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ

ಮಂಗಳೂರು,ಫೆ.3: ಪ್ರಮುಖ ನಗರಗಳ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯ ಅಗತ್ಯವಿದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ ಇದರ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಹೇಳಿದರು.
ಕೆಯುಐಡಿಎಫ್‌ಸಿ ಮತ್ತು ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ‘ಸ್ಮಾರ್ಟ್ ಸಿಟಿ’ ಕುರಿತು ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನವಲ್ಲದೆ ಸಾರ್ವಜನಿಕರ ಉದ್ದಿಮೆಗಳ ಸಹಭಾಗಿತ್ವದ ಮೂಲಕ ನಗರಗಳ ಅಭಿವೃದ್ಧಿಯಾಗಬೇಕಾಗಿದೆ. ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗು ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ರೋಶನ್ ಬೇಗ್ ತಿಳಿಸಿದರು.
ಕಾರ್ಯಾಗಾರದಲ್ಲಿ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳಲ್ಲದೆ ವಿಶ್ವ ಬ್ಯಾಂಕ್ ಕ್ಷೇತ್ರ ಪರಿಣಿತರು,ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್, ಜಿಲ್ಲಾಧಿಕಾರಿ ಡಾ.ಜಗದೀಶ್, ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಹರಿನಾಥ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಜಂಟಿ ಆಯುಕ್ತ ಗೋಕುಲ ದಾಸ್‌ನಾಯಕ್ ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಅಪ್ಪಿ, ಲ್ಯಾನ್ಸಿ ಲಾಟ್ ಪಿಂಟೊ ಉಪಸ್ಥಿತರಿದ್ದರು.







