ಧಾರ್ಮಿಕ ಗ್ರಂಥಗಳಲ್ಲಿ ದ್ವಂದ್ವಗಳಿಲ್ಲ; ಬ್ರಹ್ಮಾನಂದಾ ಶ್ರೀ

ಭಟ್ಕಳ, ಫೆ.3: ಧಾರ್ಮಿಕ ಗ್ರಂಥಗಳಾದ ಗೀತೆ, ಬೈಬಲ್ ಕುರ್‌ಆನ್ ದ್ವಂದ್ವಗಳಿಲ್ಲದೆ ಮಾನವ ಕಲ್ಯಾಣ ಉದ್ದೇಶವನ್ನು ಹೊಂದಿದ್ದು ಅವುಗಳನ್ನು ಓದುವ ಅರೆ ಪಂಡಿತರು ಧಾರ್ಮಿಕ ಗ್ರಂಥಗಳಲ್ಲಿ ದ್ವಂದ್ವಾರ್ಥಗಳನ್ನು ಹುಡುಕುತ್ತಿದ್ದಾರೆ ಎಂದು ಉಜಿರೆ ಶ್ರೀರಾಮಕ್ಷೇತ್ರದ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಅವರು ಶ್ರೀ ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನ ಆಸರಕೇರಿಯ ನೂತನ ಶಿಲಾಮಯ ಕಟ್ಟಡದಲ್ಲಿ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ಭಟ್ಕಳದ ಬಗ್ಗೆ ಹೊರಗಡೆ ಏನೋ ತಪ್ಪು ಕಲ್ಪನೆ ಇದೆ. ಆದರೆ ಅದರ ಮಧ್ಯೆಯೇ ನಿಂತು ನಾವು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಆದ್ಯಾತ್ಮ ಶಕ್ತಿಯಿಂದ ನಮ್ಮತನವನ್ನು ಕಾಪಾಡಿಕೊಂಡಿದ್ದೇವೆ ಅಂದರೆ ಅದು ಶ್ರೇಷ್ಟ ಕೆಲಸ ಎಂದ ಅವರು, ಸಮಾಜದ ಉದ್ಧಾರಕ್ಕಾಗಿ ಎಲ್ಲರೂ ರಾಜಕೀಯ ಹೊರಗಿಟ್ಟು ಬನ್ನಿ. ರಾಜಕೀಯ ಸಮಾಜದಲ್ಲಿ ಒಡಕು ಮೂಡಿಸುತ್ತದೆ. ಸಮಾಜದ ಕಾರ್ಯಕ್ರಮದಲ್ಲಿ ಯಾವತ್ತೂ ರಾಜಕೀಯ ತರಬೇಡಿ. ವೈಯುಕ್ತಿಕವಾಗಿ ಬೇಕಾದಷ್ಟು ರಾಜಕೀಯ ಮಾಡಿಕೊಳ್ಳಿ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡುವ ತಪ್ಪು ಮಾಡದೇ ಶೂದ್ರರನ್ನು ಪ್ರಾಣಿಗಿಂತಲೂ ನಿಕೃಷ್ಟವಾಗಿ ಕಾಣುತ್ತಿದ್ದ ಅಂದಿನ ಕಾಲದಲ್ಲಿ ಅವತಾರವೆತ್ತಿದ ಬೃಹ್ಮಶ್ರೀ ನಾರಾಯಣ ಗುರುಗಳು ವಸುದೈವ ಕುಟುಂಬಕಂ ಎಂಬ ತತ್ವವನ್ನು ಪ್ರತಿಪಾದಿಸಿದರು. ಭಕ್ತಿಯ ಕಣ್ಣಿನಿಂದ ದೇವರನ್ನು ನೋಡಿದಾಗ ಮಾತ್ರ ದೇವರ ಸಾನಿಧ್ಯ ಸಾಧ್ಯವಾಗುತ್ತದೆ. ನಿಚ್ಛಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ದೈವಿಕ ಕಾರ್ಯಕ್ರಮಗಳು ಇಡೀ ರಾಜ್ಯಕ್ಕೇ ಮಾದರಿಯಾಗಿದೆ. ಈ ಭಟ್ಕಳದ ಭೂಮಿ ಭೂವೈಕುಂಟವಾಗಿದೆ. ತಿರುಪತಿಯ ಕಳೆ ಇಲ್ಲಿ ಬಂದಿದೆ ಎಂದರು ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದ ಹೊಗೆವಡ್ಡಿ ವೀರಾಂಜನೇಯ ದೇವಸ್ಥಾನದ ದರ್ಮದರ್ಶಿ ಅನಂತ ನಾಯ್ಕ ಮಾತನಾಡಿ ಮಾನವನು ಪರಮಾತ್ಮನಾಗಲು ಸಾಧ್ಯವಿಲ್ಲ, ಧರ್ಮಾತ್ಮನಾಗಬಹುದು. ನಮ್ಮಲ್ಲಿರುವ ಗರ್ವ, ತಲೆಯಲ್ಲಿ ಬರುವ ದೊಡ್ಡಸ್ಥನ ಬಿಟ್ಟರೆ ಮಾತ್ರ ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯವಿದೆ. ಭಟ್ಕಳದ ನಾಮಧಾರಿಗಳು ಇಡೀ ಜಿಲ್ಲೆಯ ಸಮಾಜದ ಎಲ್ಲರಿಗೂ ಮಾದರಿಯಾಗಬೇಕು. ಎಲ್ಲಾ ಸಮಾಜ ಬಾಂಧವರು ಇಂದಿನಿಂದಲೇ ಸಮಾಜದ ಏಳಿಗೆಗಾಗಿ ಒಗ್ಗಟ್ಟಾಗಿ ದುಡಿಯುವ ಪಣ ತೊಡಬೇಕು ಎಂದು ಕರೆ ನೀಡಿದರು.
ಸೋಡಿಗದ್ದೆ ಮಹಾಸತಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಈ.ಎಚ್, ಶ್ರೀರಾಮ ಕ್ಷೇತ್ರದ ಟ್ರಸ್ಟೀ ತುಕಾರಾಮ, ಆಧ್ಯಕ್ಷತೆ ವಹಿಸಿದ್ದ ಡಿ.ಬಿ.ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ರಾಮ ಕ್ಷೇತ್ರದ ಟ್ರಸ್ಟೀ ಜೆ.ಎನ್.ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಮಾಸ್ತಿ ಜೆ ನಾಯ್ಕ ಸ್ವಾಗತಿಸಿದರೆ, ಮಧುಕೇಶ್ವರ ನಾಯ್ಕ ವಂದಿಸಿದರು. ನಾರಾಯಣ ನಾಯ್ಕ, ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಿಲಾಮಯ ದೇವಸ್ಥಾನ ನಿರ್ಮಿಸುವಲ್ಲಿ ಶ್ರಮವಹಿಸಿದ ಹಲವರನ್ನು ಸನ್ಮಾನಿಸಲಾಯಿತು.







