ಜಿಷಾ ತಾಯಿ, ಸಹೋದರಿ ನಡುವೆ ಜಗಳ: ಗಾಯಗೊಂಡ ಮಹಿಳಾ ಪೊಲೀಸ್

ಪೆರುಂಬಾವೂರ್,ಫೆ.3: ದುಷ್ಕರ್ಮಿಗಳಿಗೆ ದಾರುಣವಾಗಿ ಬಲಿಯಾಗಿದ್ದ ಇಲ್ಲಿನ ಕಾನೂನು ವಿದ್ಯಾರ್ಥಿನಿ ಜಿಷಾರ ತಾಯಿ ರಾಜೇಶ್ವರಿ ಹಾಗೂ ಸಹೋದರಿ ದೀಪಾರ ನಡುವೆ ಹಣದ ವಿಚಾರದಲ್ಲಿ ಜಗಳವನ್ನು ತಡೆಯಲು ಮುಂದಾದ ಮಹಿಳಾ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಪೊಲೀಸ್ ಸೊಂಟಕ್ಕೆ ಏಟು ಬಿದ್ದಿದ್ದು ಅವರನ್ನು ಕೋತಮಂಗಲಂ ಸರಕಾರಿ ಆಸ್ಪತ್ರೆಗೆದಾಖಲಿಸಿದ್ದಾಗಿದೆ. ಜಿಷಾ ಕೊಲೆಯಾದ ಹಿನ್ನೆಲೆಯಲ್ಲಿ ಸಿಕ್ಕಿದ ನಷ್ಟ ಪರಿಹಾರ ಹಣದ ಕುರಿತು ಜಿಷಾ ತಾಯಿ ಮತ್ತುಸಹೋದರಿ ನಡುವೆ ಜಗಳ ನಡೆದಿತ್ತು.
ಮಂಗಳವಾರ ಬೆಳಗ್ಗೆ ಇಬ್ಬರೂ ಪರಸ್ಪರ ಜಗಳಾಡಿದ್ದಾರೆ. ಮಾತು ಬೆಳೆದು ರಾಜೇಶ್ವರಿ ಮಗಳಿಗೆ ಪೊರಕೆಯಲ್ಲಿ ಹೊಡೆಯಲು ಮುಂದಾದಾಗ ದೀಪಾ ತಾಯಿಮೇಲೆ ಕುರ್ಚಿಯನ್ನು ಬಿಸಾಡಿದ್ದಾರೆ. ಇದು ರಾಜೇಶ್ವರಿ ಮೇಲೆ ಬೀಳದಂತೆ ತಡೆದ ಮಹಿಳಾ ಪೊಲೀಸ್ ಅಧಿಕಾರಿ ಗಾಯಗೊಂಡರು ಎನ್ನಲಾಗಿದೆ. ವಿಷಯ ತಿಳಿದು ಡಿವೈಎಸ್ಪಿ ಹಾಗೂ ಇತರ ಪೊಲೀಸರು ಮಧ್ಯಾಹ್ನ 12ಗಂಟೆಗೆ ತೆರಳಿದ್ದರು. ಬಳಿಕ ಗಾಯಾಳು ಮಹಿಳಾ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಸೆರಿಸಲಾಗಿದೆ. ಈ ಘಟನೆಯನ್ನು ಮುಂದಿಟ್ಟು ದೀಪಾ ಹಾಗೂ ರಾಜೇಶ್ವರಿ ವಿರುದ್ಧ ಕೇಸು ದಾಖಲಿಸಬೇಕೆಂದು ಕೆಲವು ಪೊಲೀಸರು ತಮ್ಮ ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಹಿಂದೆ ಕೂಡಾ ರಾಜೇಶ್ವರಿ ಹಾಗೂ ದೀಪಾ ಜಗಳ ಮಾಡಿಕೊಂಡಿದ್ದರು. ನಾಲ್ಕು ತಿಂಗಳು ನಡೆದ ಇವರಿಬ್ಬರ ಜಗಳದಲ್ಲಿ ಮಹಿಳಾ ಪೊಲೀಸೊಬ್ಬರ ಕಾಲಿಗೆ ಗಾಯವಾಗಿತ್ತು.
ಮಂಗಳವಾರದ ಘಟನೆಯ ಕುರಿತು ಮಹಿಳಾ ಪೊಲೀಸ್ ನೀಡಿದ ವರದಿಯನ್ನು ಕೊಡನಾಡ್ ಎಸ್ಸೈ ಗ್ರಾಮೀಣ ಎಸ್ಪಿಗೆ ಗುರುವಾರ ಸಲ್ಲಿಸಿದ್ದು, ದೀಪಾರಿಂದ ಪ್ರಮಾದ ಆಗಿದೆ ಎಂದು ಅದರಲ್ಲಿ ವಿವರಿಸಲಾಗಿದೆ. ಆದ್ದರಿಂದ ತಾಯಿ ಮಗಳ ವಿರುದ್ಧ ಕೇಸು ದಾಖಲಿಸುವುದಿಲ್ಲ ಎಂದು ಎಸ್ಸೈ ತಿಳಿಸಿದ್ದಾರೆ ಎಂದು ವರದಿಯಾಗಿದೆ.





