ಯು ಟ್ಯೂಬ್‌ನಲ್ಲಿ 'ಚಂಡಿಕೋರಿ': ಕಾಪಿರೈಟ್ ಕಾಯ್ದೆಯಡಿ ದೂರು

ಮಂಗಳೂರು, ಫೆ.3: ‘ಚಂಡಿಕೋರಿ’ ತುಳು ಸಿನೆಮಾ ಈಗ ಕಾನೂನು ಬಾಹಿರವಾಗಿ ಯು ಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಚಂಡಿಕೋರಿ ಯಶಸ್ವಿ ಚಿತ್ರದ ಡಿಡಿ ಹಕ್ಕನ್ನು ಅದರ ನಿರ್ಮಾಪಕರು ಸಂಸ್ಥೆಯೊಂದಕ್ಕೆ ನೀಡಿದ್ದಾರೆ. ಡಿಡಿ ಮಾರಾಟದ ಹಂತದಲ್ಲಿರುವಾಗಲೇ ಚಿತ್ರ ಈಗ ಯು ಟ್ಯೂಬ್‌ನಲ್ಲಿ ಅಪ್ ಲೋಡ್ ಆಗಿದ್ದು ಬೆಳಕಿಗೆ ಬಂದಿದೆ. ಚಿತ್ರ ನಿರ್ಮಾಪಕರ ಅನುಮತಿ ಇಲ್ಲದೆ ಯು ಟ್ಯೂಬ್‌ಗೆ ಚಿತ್ರವನ್ನು ಅಪ್‌ಲೋಡ್ ಮಾಡಿದ್ದು ಕಾಪಿರೈಟ್ ಕಾಯ್ದೆಯಡಿ ಬರುತ್ತದೆ ಎಂದು ಚಿತ್ರದ ಸಹ ನಿರ್ಮಾಪಕ ಸಚಿನ್ ಎ.ಎಸ್. ಉಪ್ಪಿನಂಗಡಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವುದರಿಂದ ಸಹಜವಾಗಿಯೇ ಇದು ಮೊಬೈಲ್‌ಗಳಲ್ಲೂ ಹರಿದಾಡುತ್ತದೆ. ಆದುದರಿಂದ ಮೊಬೈಲ್ ಶಾಪ್‌ಗಳಲ್ಲಿ ಮತ್ತು ಸೈಬರ್ ಸೆಂಟರ್‌ಗಳಲ್ಲಿ ಪರಿಶೀಲಿಸಿ ಅಕ್ರಮವನ್ನು ತಡೆಗಟ್ಟುವಂತೆ ಚಿತ್ರ ನಿರ್ಮಾಪಕರು ಮನವಿ ಮಾಡಿದ್ದಾರೆ.
ಸೀಮಿತ ಮಾರುಕಟ್ಟೆಯ ತುಳು ಚಿತ್ರಗಳ ನಿರ್ಮಾಪಕರು ಚಿತ್ರ ನಿರ್ಮಾಣಕ್ಕೆ ಮಾಡಿದ ವೆಚ್ಚವನ್ನು ಬೇರೆ ಬೇರೆ ರೂಪದಲ್ಲಿ ಪಡೆಯಬಯಸುತ್ತಾರೆ. ಡಿಡಿ ಮಾರಾಟವೂ ಕೂಡ ಇದರ ಭಾಗವಾಗಿರುತ್ತದೆ. ಆದರೆ ಯುಟ್ಯೂಬ್‌ನಲ್ಲಿ ಅಪ್ ಲೋಡ್ ಆಗಿಬಿಟ್ಟರೆ ಮತ್ತೆಲ್ಲ ಬಾಗಿಲುಗಳು ಮುಚ್ಚಿಕೊಂಡಂತೆ. ಇದರಿಂದ ಚಿತ್ರ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಪೊಲೀಸರು ತನಿಖೆ ನಡೆಸಿ ಯು ಟ್ಯೂಬ್‌ನಲ್ಲಿ ಚಿತ್ರ ಅಪ್‌ಲೋಡ್ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡರೆ ಇಂತಹ ಅಪರಾಧದಲ್ಲಿ ತೊಡಗುವವರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.







