ಪಾರಾಗಲು ನದಿಗೆ ಹಾರಿದ ಸರಕಳ್ಳ ಮುಳುಗಿ ಸಾವು

ಆಲುವ,ಫೆ.3: ತಪ್ಪಿಸಿಕೊಳ್ಳಲು ಓಡಿ ಹೋಗಿ ನದಿಗೆ ಹಾರಿದ ಸರಕಳ್ಳರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಚೆಂಙಮನಾಡ್ ಕುನ್ನುಕರ ಕಟ್ಟಿಯಾಲ್ ನಿಷಾದ್(22) ಮೃತನಾದ ಸರಕಳ್ಳ. ಈತನೊಂದಿಗಿದ್ದ ಸಂಬಂಧಿಕ ಕಾಂಞಿಪರಂಬದ ಆಶಿಕ್‌ನನ್ನು(24) ಆಲುವ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ನಿನ್ನೆ ಬೆಳಗ್ಗೆ ಹನ್ನೊಂದು ಗಂಟೆಗೆ ತೊಟ್ಟಕ್ಕಾಟ್ಟುಕರ ಪೆರಿಯಾರ್ ವಾಲಿ ಸಮೀಪದಲ್ಲಿ ಇವರು ಹೊಳೆಗೆ ಹಾರಿದ್ದು. ಹೊಳೆಯನ್ನು ಈಜಿದಾಟುವ ವೇಳೆ ಆಯಾಸಗೊಂಡು ಮುಳುಗಿದ್ದರು. ಇವರಲ್ಲಿ ನಿಷಾದ್ ಮೃತಪಟ್ಟಿದ್ದು, ಆಶಿಕ್‌ನನ್ನು ಊರವರು ರಕ್ಷಿಸಿದ್ದಾರೆ.
ನಿನ್ನೆ ಬೆಳಗ್ಗೆ 9:30ಕ್ಕೆ ಕೊತಮಂಗಲಂ ತಲಕ್ಕಾಡ್ ಚೆಕ್‌ಪೋಸ್ಟ್ ಬಳಿ ಸಾರಮ್ಮ ಎಂಬವರ ಸರವನ್ನು ಇವರಿಬ್ಬರು ಸೇರಿ ಕಿತ್ತುಕೊಂಡಿದ್ದರು. ಪೊಲೀಸರಿಗೆ ಈ ಕುರಿತು ವಯರ್‌ಲೆಸ್ ಸಂದೇಶ ಸಿಕ್ಕಿತ್ತು. ಮಾರ್ತಾಂಡವರ್ಮ ಸೇತುವೆ ಬಳಿ ಸರಕಳ್ಳರನ್ನು ಪೊಲೀಸರು ಮತ್ತು ಊರವರು ತಡೆದಾಗ ತಪ್ಪಿಸಿಕೊಳ್ಳುವ ಉದ್ದೇಶದಿಂದ ಹೊಳೆಗೆ ಹಾರಿದ್ದರು. ಈಗಬದುಕುಳಿದಿರುವ ಆಶಿಕ್ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆಂದು ವರದಿ ತಿಳಿಸಿದೆ.







