ನೋಟುಗಳ ಮರುಚಲಾವಣೆ ಪ್ರಕ್ರಿಯೆ ಬಹುತೇಕ ಪೂರ್ಣ: ಶಕ್ತಿಕಾಂತ ದಾಸ್

ಹೊಸದಿಲ್ಲಿ, ಫೆ.3: ಅಧಿಕ ಮುಖಬೆಲೆಯ ನೋಟುಗಳನ್ನು ಅಪವೌಲ್ಯಗೊಳಿಸಿದ ಬಳಿಕ ಆರಂಭವಾದ ನೋಟುಗಳ ಮರುಚಲಾವಣೆ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು ಈಗ ಹಣ ಪಡೆಯಲು ವಾಸ್ತವವಾಗಿ ಯಾವುದೇ ನಿರ್ಬಂಧ ಇಲ್ಲ ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಉಳಿತಾಯ ಖಾತೆಯಿಂದ ವಾರಕ್ಕೆ 24 ಸಾವಿರ ರೂ. ಹಿಂಪಡೆಯುವ ಮಿತಿಯನ್ನು ಹೊರತುಪಡಿಸಿ, ಉಳಿದೆಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಈ ಮಿತಿ ಕೂಡಾ ಹೆಚ್ಚಿನ ಸಮಯ ಇರದು ಎಂದು ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಿಳಿಸಿದರು. ಹಣದ ಸರಬರಾಜು ಮತ್ತು ನಿರ್ವಹಣೆ ಆರ್‌ಬಿಐಯ ಜವಾಬ್ದಾರಿಯಾಗಿದೆ. ಕೆಲವರಷ್ಟೇ ತಿಂಗಳಿಗೆ 1 ಲಕ್ಷದಷ್ಟು ಹಣ ವಾಪಾಸು ಪಡೆಯುತ್ತಾರೆ. ಆದ್ದರಿಂದ ವಾರಕ್ಕೆ 24 ಸಾವಿರ ರೂ. ಮಿತಿ ಕೂಡಾ ಹೆಚ್ಚು ಸಮಯ ಇರದು ಎಂದರು.
ಕೇವಲ 90 ದಿನಗಳಲ್ಲೇ ಹಣದ ಮರುಚಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಕಡಿಮೆ ಮುಖಬೆಲೆಯ ನೋಟುಗಳನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
Next Story





