ಕಲಾವಿಭಾಗದ ವಿಷಯವನ್ನು ಪ್ರತ್ಯೇಕಿಸಿ ವಿಜ್ಞಾನ ವಿಭಾಗಕ್ಕೆ ಸೇರ್ಪಡೆ ಪ್ರಸ್ತಾಪಕ್ಕೆ ಮಂಗಳೂರು ವಿ.ವಿ.ಶೈಕ್ಷಣಿಕ ಮಂಡಳಿ

ಮಂಗಳೂರು.ಫೆ.3: ಸ್ನಾತಕೋತ್ತರ ಪದವಿಯಲ್ಲಿ ಏಕರೂಪತೆ ತರಲು ಮನಃಶಾಸ್ತ್ರ , ಭೂಗೋಳ ಶಾಸ್ತ್ರ, ಸಂಖ್ಯಾ ಶಾಸ್ತ್ರ, ಗಣಿತ ಶಾಸ್ತ್ರ, ಮಾನವ ಶಾಸ್ತ್ರ ಹಾಗೂ ಅಪರಾಧ ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಬಿಎಸ್ಸಿ, ಎಂಎಸ್ಸಿಗಳಲ್ಲಿ ಮಾತ್ರ ಪದವಿ ನೀಡುವಂತೆ ವಿಶ್ವ ವಿದ್ಯಾನಿಲಯಗಳಿಗೆ ಸೂಚನೆ ನೀಡಲು ಸರಕಾರದ ಸುತ್ತೋಲೆಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ವಿರೋಧ ವ್ಯಕ್ತಪಡಿಸಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳ ಗಂಗೋತ್ರಿ ವಿಶ್ವ ವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿಯ ಸಭೆ ನಡೆಯಿತು.
ಉನ್ನತ ಶಿಕ್ಷಣ ಮಂಡಳಿಯ ನಿರ್ಣಯವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಂಡಿಸಿದ ಸಂದರ್ಭದಲ್ಲಿ ಮಂಡಳಿಯ ಸದಸ್ಯರಾದ ಕಿಶೋರಿ ,ಅಮೃತ ಶೆಣೈ, ಡಾ.ವರದರಾಜ ಚಂದ್ರಗಿರಿ, ಆಡ್ರೋ ಪಿಂಟೋ ಸೇರಿದಂತೆ ಹೆಚ್ಚಿನ ಸದಸ್ಯರು , ಇದರಿಂದ ಕಲಾವಿಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಪ್ರಸಕ್ತ ಕಲಾವಿಭಾಗದ ಸಾಕಷ್ಟು ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಮನಃಶಾಸ್ತ್ರ, ಅಪರಾಧ ಶಾಸ್ತ್ರವನ್ನು ಇತರ ಕಲಾವಿಭಾಗದ ವಿಷಯಗಳೊಂದಿಗೆ ಓದಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಆದರೆ ಸರಕಾರದ ಈ ರೀತಿಯ ತೀರ್ಮಾನವನ್ನು ವಿಶ್ವ ವಿದ್ಯಾನಿಲಯಗಳಲ್ಲಿ ಜಾರಿಗೆ ತಂದರೆ ಮುಂದಿನ ಹಂತದಲ್ಲಿ ಮನಃಶಾಸ್ತ್ರದಂತಹ ಪ್ರಮುಖ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಕಲಾವಿಭಾಗದ ವಿದ್ಯಾರ್ಥಿಗಳಿಗೆ ಸಾಧ್ಯವಾಗದೆ ಹೋಗಬಹುದು.ಇದರಿಂದ ಕಲಾವಿಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಶೈಕ್ಷಣಿಕ ಮಂಡಳಿಯ ಸದಸ್ಯರ ಒಮ್ಮತದ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ಅಭಿಪ್ರಾಯವನ್ನು ಕುಲಾಧಿಪತಿಗಳ ಹಾಗೂ ಸರಕಾರದ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ವಿಶ್ವ ವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ಸಹಾಯವಾಣಿ ಆರಂಭಿಸಿ:
‘‘ಮಂಗಳೂರು ವಿಶ್ವ ವಿದ್ಯಾನಿಲಯದಿಂದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರವಾಣಿಯ ಮೂಲಕ ಕರೆ ಮಾಡಿದರೆ ತಕ್ಷಣ ಸರಿಯಾದ ಸ್ಪಂದನ ದೊರೆಯುತ್ತಿಲ್ಲ . ಶೈಕ್ಷಣಿಕ ಮಂಡಳಿಯ ಸದಸ್ಯನಾಗಿ ನನಗೆ ಈ ರೀತಿಯ ಅನುಭವವಾಗಿದೆ. ಆದುದರಿಂದ ವಿದ್ಯಾರ್ಥಿಗಳ ಸಮಸ್ಯೆಗೆ ವಿಶ್ವ ವಿದ್ಯಾನಿಲಯದಿಂದ ತಕ್ಷಣ ಸ್ಪಂದಿಸುವ ಸಹಾಯವಾಣಿಯನ್ನು ಆರಂಭಿಸಿ’’ಎಂದು ಶೈಕ್ಷಣಿಕ ಮಂಡಳಿಯ ಸದಸ್ಯ ಅಭಿಷೇಕ್ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವುದಾಗಿ ಕುಲಪತಿ ಭರವಸೆ ನೀಡಿದರು.
ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದರೂ ಕೆಲವು ವಿದ್ಯಾರ್ಥಿಗಳ ಅಂಕಪಟ್ಟಿ ಬಾರದೆ ಇರುವ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಸದಸ್ಯರು ಸಭೆಯ ಗಮನಸೆಳೆದರು. ಈ ವರ್ಷದ ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ಕಳೆದ ವರ್ಷ ಆಗಿರುವ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಂಡಿದ್ದೇವೆ. ಫಲಿತಾಂಶ ಪ್ರಕಟಕ್ಕೆ ಮುಂಚಿತವಾಗಿ ಅಂಕಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆಯಾ ಕಾಲೇಜುಗಳ ಹೆಸರುಗಳೊಂದಿಗೆ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಿದೆ. ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ . ಈ ನಡುವೆ ಏನಾದರೂ ಸಮಸ್ಯೆಗಳಿದ್ದರೆ ಆಯಾ ಕಾಲೇಜಿನ ಪ್ರಾಂಶುಪಾಲರು ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಬಂದ ದೂರುಗಳನ್ನು ದಾಖಲಿಸಿ ಕ್ರಮ ಕೈ ಗೊಳ್ಳಲಾಗುತ್ತಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪಿ.ಎ.ಖಾನ್ ತಿಳಿಸಿದ್ದಾರೆ.
ಸಭೆಯಲ್ಲಿ ಅಂಚೆ ತರೆಪಿನ ಶಿಕ್ಷಣದಡಿ ಪ್ರಾಂಭಿಸಲಿರುವ ಪಿ.ಜಿ.ಡಿಪ್ಲೋಮಾ ಇನ್ ರೂರಲ್ ಡೆವಲಪ್ ಮೆಂಟ್ ವಿನಿಮಯ ಮತ್ತು ಪರಿಷ್ಕೃತ ಪಠ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು. ವಿಶ್ವ ವಿದ್ಯಾನಿಲಯದ ಘಟಕ ಕಾಲೇಜಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಡಿಕೇರಿ ಇಲ್ಲಿ ಸ್ನಾತಕೋತ್ತರ ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್ ಮೆಂಟ್ ವಿಭಾಗ ಸ್ಥಾಪನೆ ಹಾಗೂ ಹುದ್ದೆಗಳ ಸೃಜನೆ ಬಗ್ಗೆ ಸಭೆ ಅನುಮೋದನೆ ನೀಡಿತು.
ಸಭೆಯಲ್ಲಿ ಕುಲಸಚಿವ (ಆಡಳಿತ) ಕೆ.ಎಂ.ಲೋಕೇಶ್, (ಪರೀಕ್ಷಾಂಗ ಕುಲಸಚಿವ) ಎ.ಎಂ.ಖಾನ್ , ಹಣಕಾಸು ಅಧಿಕಾರಿ ಶ್ರೀಪತಿ ಕಲ್ಲೂರಾಯ ಮೊದಲಾದವರು ಉಪಸ್ಥಿತರಿದ್ದರು.







