ಮಸ್ಕಿಬೈಲು ಮನೆ ಕಳ್ಳತನ ಪ್ರಕರಣ : ಇಬ್ಬರು ಅಪ್ರಾಪ್ತರ ಸಹಿತ ನಾಲ್ವರ ಬಂಧನ

ಉಡುಪಿ, ಫೆ.3: ಬಾರ್ಕೂರು ಮಸ್ಕಿಬೈಲು ಎಂಬಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಫೆ.3ರಂದು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಾಸ್ತಾನ ಗೋಳಿಬೆಟ್ಟುವಿನ ಪ್ರಹ್ಲಾದ ಪೂಜಾರಿ(23), ಸಾಸ್ತಾನದ ಪ್ರಶಾಂತ ಜಿ.(24) ಎಂದು ಗುರುತಿಸಲಾಗಿದೆ.
ಕಾನೂನಿನ ಸಂಘರ್ಷಕ್ಕೊಳಗಾದ ಇಬ್ಬರು ಬಾಲಕರನ್ನು ರಿಮ್ಯಾಂಡ್ ಹೋಮ್‌ಗೆ ನೀಡಲಾಗಿದೆ.
ಇವರು ಜ.30ರಂದು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಕೂರು ಮಸ್ಕಿಬೈಲು ಎಂಬಲ್ಲಿರುವ ಮನೆಯೊಂದರ ಮನೆಯ ಬಾಗಿಲಿನ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ್ದರು. ಕ್ಷಿಪ್ರ ಕಾರ್ಯಾ ಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ಚಿನ್ನದ ಸರ, ಬ್ರಾಸ್ಲೆಟ್, ಉಂಗುರ, ಒಂದು ಜೊತೆ ಕಿವಿಗೆ ಧರಿಸುವ ಟಿಕ್ಕಿ, 2,560ರೂ. ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
19.420 ಗ್ರಾಂ ತೂಕದ ಚಿನ್ನಾಭರಣಗಳ ಒಟ್ಟು ಮೌಲ್ಯ 58,000ರೂ. ಮತ್ತು ಕಾರಿನ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಹಿಂದೆ ಕೊಟೇಶ್ವರದಲ್ಲಿ ಮಹಿಳೆಯ ಸರ ಅಪರಹರಣಗೈದಿದ್ದ ಪ್ರಹ್ಲಾದ ಪೂಜಾರಿ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದ್ದನು. ಈ ಬಗ್ಗೆ ಕುಂದಾಪುರ ಹಾಗೂ ಕೋಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎರಡೂ ಪ್ರಕರಣಗಳು ಇದೀಗ ಕುಂದಾಪುರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅಲ್ಲದೇ ಪ್ರಶಾಂತ್ ಕೂಡ ಪ್ರಹ್ಲಾದ ಪೂಜಾರಿಯೊಂದಿಗೆ ಸೇರಿ ಕೊಟೇಶ್ವರದಲ್ಲಿ ಮಹಿಳೆಯ ಸರಗಳ್ಳತನ ಮಾಡಿದ್ದನು. ಇವರಿಬ್ಬರೂ ಹಳೆ ಆರೋಪಿಗಳಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮತ್ತು ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕ ಸಂಪತ್ ಕುಮಾರ್, ಎಎಸ್ಸೈ ರೊಸಾರಿಯೊ ಡಿಸೋಜ ಮತ್ತು ಸಿಬ್ಬಂದಿಗಳಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ ಕೆ., ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ, ರಾಜುಕುಮಾರ್, ದಯಾನಂದ ಪ್ರಭು, ಚಾಲಕ ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ಆಧುನಿಕ ತಂತ್ರಜ್ಞಾನ ವಿಭಾಗದ ಎಎಸ್ಐ ಅಚ್ಯುತ, ಸಿಬ್ಬಂದಿಯವರಾದ ವಿಜಯ ಕುಮಾರ್ ಮತ್ತು ರಮೇಶ ನಾಯ್ಕರವರು ಸಹಕರಿಸಿದ್ದಾರೆ.







