ಬಿಸಿಸಿಐನಿಂದ ‘ವ್ಯವಹಾರ ಅಭಿವೃದ್ಧಿ ಮತ್ತು ಉದ್ಯಮಶೀಲತೆ’ ಕಾರ್ಯಾಗಾರ

ಮಂಗಳೂರು, ಫೆ. 3: ಉದ್ಯಮದ ಪ್ರತಿ ಕ್ಷೇತ್ರದಲ್ಲೂ ಇಂದು ಸ್ಪರ್ಧೆಯನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ಯಮ ಪ್ರಾರಂಭಕ್ಕೆ ಮುನ್ನ ಸೂಕ್ತ ಮಾರ್ಗದರ್ಶನ ಸಹಿತ ಸರಿಯಾದ ತರಬೇತಿ ಅಗತ್ಯವಾಗಿದೆ ಎಂದು ಮಂಗಳೂರು ಕೈಗಾರಿಕಾ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಎಸ್.ಜಿ.ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಅವರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ನಗರದ ಹಂಪನಕಟ್ಟದ ಐಎಂಎ ಸಭಾಂಗಣದಲ್ಲಿ ಇಂದು ಸಂಜೆ ನಡೆದ ‘ವ್ಯವಹಾರ ಅಭಿವೃದ್ಧಿ ಮತ್ತು ಉದ್ಯಮಶೀಲತೆ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಕೈಗಾರಿಕಾ ನೀತಿ ಮತ್ತು ಸಹಾಯಧನ’ ವಿಷಯದಲ್ಲಿ ಮಾತನಾಡಿದರು.
ಸಾಮಾನ್ಯ ವ್ಯಕ್ತಿಯೋರ್ವ ವ್ಯಾಪಾರ ಅಥವಾ ಕೈಗಾರಿಕೆಯನ್ನು ಪ್ರಾರಂಭಿಸುವುದು ಅಸಾಧ್ಯವಾಗಿದೆ ಎಂಬ ವಾದ ಸರಿಯಲ್ಲ. ಇಂದು ದೇಶದ ಉನ್ನತ ವ್ಯಾಪಾರಸ್ಥರೆಂದು ಗುರುತಿಸಲ್ಪಟ್ಟವರು ಸಾಮಾನ್ಯರಾಗಿದ್ದುಕೊಂಡೇ ಪ್ರಾರಂಭಿಸಿರುವ ಉದ್ಯಮಗಳು ಜಗಜ್ಜಾಹೀರಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಕೀಳರಿಮೆಯನ್ನು ಬಿಟ್ಟು ಹೊರಗಿನ ಮಾರುಕಟ್ಟೆ ಬಗೆಗಿನ ಜ್ಞಾನ, ಮಾರ್ಗದರ್ಶನ ಮತ್ತು ಸರಿಯಾದ ತರಬೇತಿಯೊಂದಿಗೆ ಯಾವ ವ್ಯಕ್ತಿಯೂ ಉದ್ಯಮವನ್ನು ಪ್ರಾರಂಭಿಸಬಹುದು ಎಂದರು.
ಉದ್ಯಮವನ್ನು ಪ್ರಾಂಭಿಸುವ ಮುನ್ನ 6 ಅಂಶಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಎಸ್.ಜಿ.ಹೆಗ್ಡೆ ಅವರು, ಉದ್ಯಮಶೀಲತೆ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ, ಪರಾಕ್ರಮ ಇವುಗಳನ್ನು ಅಳವಡಿಸಿಕೊಂಡರೆ ಉದ್ಯಮದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಆದರೆ, ಜ್ಞಾನ, ಮಾರ್ಗದರ್ಶನ ಮತ್ತು ತರಬೇತಿ ಇಲ್ಲದೆ ಪ್ರಾಂಭಿಸಲಾಗುವ ಉದ್ಯಮಗಳು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಸಾಧ್ಯತೆಗಳನ್ನು ನಿರಾಕರಿಸುವಂತಿಲ್ಲ ಎಂದು ಎಚ್ಚರಿಸಿದರು.
ಉದ್ಯಮ ಆರಂಭಿಸಲು ಸರಕಾರಗಳ ಹಲವು ಯೋಜನೆಗಳು ಜಾರಿಯಲ್ಲಿದ್ದು, ಇದಕ್ಕೆ ಸರಕಾರಗಳು ಸಹಾಯಧನವನ್ನೂ ನೀಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಗಾರಿಕೆ ಪ್ರಾರಂಭಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರಕಾರದ ಪಿವೈಜಿಪಿ ಯೋಜನೆಯಡಿ ಉದ್ಯಮ ಪ್ರಾರಂಭಿಸಲು ಬ್ಯಾಂಕ್‌ಗಳು 25 ಲಕ್ಷ ರೂ. ವರೆಗೆ ಸಾಲ ನೀಡುತ್ತವೆ. ಆದರೆ, ಈ ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲಕ್ಕೆ ಭದ್ರತೆ ಅಥವಾ ಜಾಮೀನಿನ ಅಗತ್ಯ ಇರುವುದಿಲ್ಲ. ಅಲ್ಲದೆ, ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿಯ ಪ್ರಕಾರ ಕೆಲವು ಯೋಜನೆಗಳು ಕೈಗಾರಿಕೆ ಸ್ಥಾಪನೆಗೆ ಪೂರಕವಾಗಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಲೆಕ್ಕಪರಿಶೋಧಕ ನಿತಿನ್ ಜೆ. ಶೆಟ್ಟಿ ಅವರು ‘ವ್ಯಾಪಾರ ಮತ್ತು ಉದ್ಯಮಶೀಲತೆ’ ಎಂಬ ವಿಷಯದಲ್ಲಿ ಮಾತನಾಡಿದರು.
ಬಿಸಿಸಿಐನ ಕಾರ್ಯನಿರ್ವಾಹಕ ಸದಸ್ಯ ಖಾಸಿಂ ಅಹ್ಮದ್ ಎಚ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಬಿಸಿಸಿಐ ಅಸ್ತಿತ್ವದ ಉದ್ದೇಶ, ಅಗತ್ಯ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಸಿಐನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ವಹಿಸಿದ್ದರು.
ಬಿಸಿಸಿಐನ ಆರ್ಥಿಕ ಸಲಹೆಗಾರ ಝಮೀರ್ ಅಂಬರ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹಾಫಿಝ್ ಅಬ್ದುರ್ರಹ್ಮಾನ್ ಖಿರಾಅತ್ ಪಠಿಸಿ, ಕನ್ನಡಕ್ಕೆ ಅನುವಾದಿಸಿದರು. ರಫೀಕ್ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







