ಬಜ್ಪೆ ಏರ್‌ಪೋರ್ಟ್‌ನಲ್ಲಿ ವಿವಿಧ ಕರೆನ್ಸಿ ಪತ್ತೆ : ಓರ್ವನ ಬಂಧನ
ಮಂಗಳೂರು, ಫೆ. 3: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 35,02,900 ರೂ. ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಪತ್ತೆ ಹಚ್ಚಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ಅಬ್ದುರ್ ರುಬ್ (21) ಎಂದು ಗುರುತಿಸಲಾಗಿದೆ.
ಇಮಿಗ್ರೇಶನ್ ಕೌಂಟರ್‌ನಲ್ಲಿ ತಪಾಸಣೆ ಮುಗಿದು ಜೆಟ್ ಏರ್‌ವೇಸ್ ಮೂಲಕ ದುಬೈಗೆ ಪ್ರಯಾಣಿಸಲು ಸಿದ್ಧತೆಯಲ್ಲಿದ್ದಾಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈತನ ಕೈಯ್ಯಲ್ಲಿದ್ದ ಬ್ಯಾಗ್ ಪರಿಶೀಲಿಸಿದಾಗ ಚಹಾ ಹುಡಿಯ ಪ್ಯಾಕೆಟ್‌ನಲ್ಲಿ ಪ್ಯಾಕ್ ಮಾಡಿದ್ದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಯುಎಸ್ ಡಾಲರ್, ಸೌದಿ ರಿಯಾಲ್, ಯುಎಇ ದಿರ್ಹಮ್ ಮತ್ತು ಆಸ್ಟ್ರೇಲಿಯಾ ಡಾಲರ್ಸ್ ಸೇರಿ ಒಟ್ಟು 35,02,900 ರೂ. ಮೌಲ್ಯದ ಕರೆನ್ಸಿ ವಶಪಡಿಸಿಕೊಂಡಿದ್ದಾರೆ ಎಂದು ಡಿಆರ್‌ಐ ಉಪನಿರ್ದೇಶಕ ವಿನಾಯಕ ಭಟ್ ತಿಳಿಸಿದ್ದಾರೆ.
ಡಿಆರ್‌ಐ ಅಧಿಕಾರಿಗಳು ಜ.5 ರಂದು ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಫಾರೂಕ್ ಅರ್ಮಾರ್ ಎಂಬಾತನಿಂದ 25 ಲಕ್ಷ ರೂ.ವೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದ್ದರು.





